

ಬಾಗಲಕೋಟೆ: ವಿದ್ಯಾವಂತ ನಿರುದ್ಯೋಗಿಗಳು ತಮ್ಮಲ್ಲಿರುವ ಕೌಶಲ ಬಳಸಿಕೊಳ್ಳಬೇಕು. ಉದ್ಯೋಗಕ್ಕಾಗಿ ಅಲೆಯದೆ ತಾವೇ ಉದ್ಯೋಗ ಸೃಷ್ಟಿಸುವಂತಹ ಉದ್ಯಮ ಸ್ಥಾಪನೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳು ನೌಕರಿಗಾಗಿ ಹಂಬಲಿಸುತ್ತಿದ್ದಾರೆ. ಉದ್ಯೋಗ ಸಿಗಬೇಕಾದರೆ ಮೊದಲು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಬೆರಳಚ್ಚು ಮಾಡಲು ಕಲಿತಿರಬೇಕು. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ಸ್ಟೇನೋಗ್ರಾಫಿ ತರಬೇತಿ ಪಡೆದು ಸರ್ಕಾರಿ ಸೇವೆಗೆ ಸೇರಿ ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ವಿಧಾನಸೌದಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ. ಇದಕ್ಕೆ ಅವರ ಕೌಶಲವೇ ಕಾರಣ ಎಂದರು.
ನಾವು ಯಾವುದೇ ವೃತ್ತಿ ಮಾಡಲಿ ಹಂತ ಹಂತವಾಗಿ ಆ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಒತ್ತು ನೀಡಬೇಕು. ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಇದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಡಿಮೆ ಬಂಡವಾಳ ಹಾಕಿ ಅಧಿಕ ಆದಾಯ ತರುವ ಉದ್ಯೋಗಗಳಿವೆ. ಈ ಬಗ್ಗೆ ಗಮನ ಹರಿಸಬೇಕು. ಸೃಜನಶೀಲತೆ, ಹೊಸ ಚಿಂತನೆ ಮೈಗೂಡಿಸಿಕೊಳ್ಳಬೇಕು. ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ಒಟ್ಟು 29 ಕಂಪನಿಗಳು ಭಾಗವಹಿಸಿದ್ದವು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಎಸ್.ಎನ್.ಪಟ್ಟಣಶೆಟ್ಟಿ, ಜಿಲ್ಲಾ ಉದ್ಯೋಗಾಧಿಕಾರಿ ಕಿರಣ ಮಂಡಿ ಉಪಸ್ಥಿತರಿದ್ದರು.
EndFragment