ಫಲಿತಾಂಶದ ಮೇಲೆ ಕೈ-ಕಮಲ ‘ಕಣ್ಣು’

vote vvani
Published on

ಬಾಗಲಕೋಟೆ: ಸಹಕಾರಿ ಕ್ಷೇತ್ರದ ಹಿರಿಯಣ್ಣ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಮಂಗಳವಾರ ನಡೆದರು ಸಹ ಧಾರವಾಡ ಹೈಕೋರ್ಟ್ ನಿರ್ದೇಶನದಂತೆ ಫಲಿತಾಂಶ ಮಾತ್ರ ಪ್ರಕಟವಾಗಲಿಲ್ಲ. ಶಾಂತಿಯುತವಾಗಿ ಗೌಪ್ಯ ಮತದಾನ ಜರುಗಿತು. ಬಿಗಿ ಭದ್ರತೆ ನಡುವೆ ಮತಪೆಟ್ಟಿಗೆಯನ್ನು ಜಿಲ್ಲಾ ಖಜಾನೆ ಕಚೇರಿಗೆ ಸ್ಥಳಾಂತರ ಮಾಡಲಾಯಿತು.

ಶಾಕ್ ನೀಡಿದ ಕಾಶಪ್ಪನವರ !
ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು, ಈ ಹಿನ್ನೆಲೆಯಲ್ಲಿ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕುಮಾರಗೌಡ ಜನಾಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮುರುಗೇಶ ಕಡ್ಲಿಮಟ್ಟಿ ನಾಮಪತ್ರ ಸಲ್ಲಿಸಿದರು.

ಈ ನಡುವೆ ಹಲವು ರೀತಿಯ ಬೆಳವಣಿಗೆ ನಡೆದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದರು. ಆದರೆ, ವಿಜಯಾನಂದ ಕಾಶಪ್ಪನವರ ಅವರ ನಾಮಪತ್ರಕ್ಕೆ ಸೂಚಕರು, ಅನುಮೋದಕರ ಸಹಿ ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಮಧಾಹ್ನ 4 ಗಂಟೆಗೆ ಮತದಾನ ನಡೆಯಿತಾದರು ವಿಜಯಾನಂದ ಕಾಶಪ್ಪನವರ ಮತದಾನದಿಂದ ಗೈರು ಉಳಿದರು. ಇದರಿಂದ ಡಿಸಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆ ರೋಚಕ ಘಟ್ಟ ತಲುಪಿದೆ.

ಡಿಸಿಸಿ ವಶಕ್ಕೆ ಪಡೆಯಲು ಬಿಜೆಪಿ, ಕಾಂಗ್ರೆಸ್ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಜಿಲ್ಲಾ ಸಹಕಾರಿ ಬ್ಯಾಂಕ್ ಸುತ್ತಲೂ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ನಾಯಕರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ, ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಹೀಗಾಗಿ ಫಲಿತಾಂಶ ಕುತೂಹಲ ಕೆರಳಿಸಿದೆ. ಜಿಲ್ಲಾ ಸಹಕಾರಿ ಕ್ಷೇತ್ರದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವ ಸ್ಪಷ್ಟ ಚಿತ್ರಣ ಬುಧವಾರ ಹೊರ ಬೀಳಲಿದೆ. ಇನ್ನು ಭಾರಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಚುನಾವಣೆ ಅಧಿಕಾರಿಯಾಗಿರುವ ಎಂ.ಗಂಗಪ್ಪ ಅವರು ಪ್ರತಿ ಹಂತದಲ್ಲಿಯೂ ಧಾರವಾಡ ಹೈಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆಸಿದರು.

ಬಿಜೆಪಿಯಲ್ಲಿ ಒಡಂಬಡಿಕೆ ?
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡಮಟ್ಟದಲ್ಲಿ ಇತ್ತು. ಇದು ವರಿಷ್ಠರಿಗೂ ತಲೆ ನೋವಾಗಿ ಪರಿಣಮಿಸಿತ್ತು. ಹೀಗಾಗಿ ಮೊದಲ ಅರ್ಧ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಕುಮಾರಗೌಡ ಜನಾಲಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ತಪಶೆಟ್ಟಿ, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಮಣ್ಣ ತಳೇವಾಡ ಅವರನ್ನು ಬೆಂಬಲಿಸುವುದು, ಇನ್ನ್ನುಳಿದ ಅವಧಿಗೆ ಅಧ್ಯಕ್ಷ ಸ್ಥಾನ ವಿ.ಪ ಸದಸ್ಯ ಹನುಮಂತ ನಿರಾಣಿ, ಉಪಾಧ್ಯಕ್ಷ ಸ್ಥಾನ ಶಿವನಗೌಡ ಅಗಸಿಮುಂದಿನ, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕ ಸಿದ್ದು ಸವದಿ ಅವರನ್ನು ನೇಮಕ ಮಾಡುವ ಬಗ್ಗೆ ವರಿಷ್ಠರು ಒಲವು ವ್ಯಕ್ತಪಡಿಸಿದ್ದಾರೆ. ಈ ರೀತಿ ಒಡಂಬಡಿಕೆ ಮೂಲಕ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಲಾಗಿದೆ. ಇದರಿಂದ ಎಲ್ಲರಿಗೂ ಅವಕಾಶ ಸಿಗುವಂತಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕರು ತಿಳಿಸಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಹಾಗೂ ಹಾಲಿ ನಿರ್ದೇಶಕ ‘ವಿಜಯವಾಣಿ’ಗೆ ತಿಳಿಸಿದರು.

ಎರಡು ಪಕ್ಷಕ್ಕೂ ಗೆಲ್ಲುವ ವಿಶ್ವಾಸ
ಮತದಾನ ಬಳಿಕ ತಮ್ಮ ತಂತ್ರಗಾರಿಕೆ, ಲೆಕ್ಕಾಚಾರದ ಆಧಾರ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ ಗಾದೆ ಗೆಲ್ಲುವುದು ನಿಶ್ಚಿತ ಎಂದು ಮಾಧ್ಯಮಗಳ ಎದುರು ಬಿಜೆಪಿ, ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ ಸುದ್ದಿಗಾರರೊಂದಿಗೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲ. ಪಕ್ಷಾತೀತವಾಗಿ ಚುನಾವಣೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಒಂದು ಮತದಿಂದಾದರು ಗೆಲ್ಲುವುದು ನಿಶ್ಚಿತ. ಇದರಲ್ಲಿ ಸಂಶಯ ಬೇಡ. ಡಿಸಿಸಿ ಬ್ಯಾಂಕ್‌ನಲ್ಲಿ ಸದ್ಯಕ್ಕೆ ಸರ್ಕಾರದ ಷೇರು ಹಣ ಇಲ್ಲ. ಸರ್ಕಾರದಿಂದ ಇದ್ದ 72 ಲಕ್ಷ ರೂ. ಷೇರು ಹಣವನ್ನು ಬಹಳ ವರ್ಷಗಳ ಹಿಂದೆ ವಾಪಸ್ ನೀಡಲಾಗಿದೆ. ಹೀಗಾಗಿ ಸಿದ್ದನಗೌಡ ಪಾಟೀಲ ಅವರನ್ನು ಸರ್ಕಾರ ನೇಮಕ ಮಾಡಿರುವ ಕ್ರಮ ವಿರೋಧಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅಗತ್ಯ ದಾಖಲಾತಿ ಸಲ್ಲಿಸಲಾಗಿದೆ. ಆದ್ದರಿಂದ ಈ ಚುನಾವಣೆ ಗೆಲ್ಲುವ ವಿಶ್ವಾಸವಿದೆ. ಇನ್ನು ವಿಜಯಾನಂದ ಕಾಶಪ್ಪನವರ ಅವರಿಗೆ ಸೂಚಕರು, ಅನುಮೋದಕರು ಇರಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರ ನಾಮಪತ್ರ ತೀರಸ್ಕೃತಗೊಂಡಿದೆ. ಮತದಾನಕ್ಕೂ ಗೈರು ಉಳಿದಿದ್ದಾರೆ. ಯಾರು ಯಾಕೆ ಹೀಗೆ ಮಾಡಿದರು ನಮಗೆ ಗೊತ್ತಿಲ್ಲ ಎಂದು ತಿಳಿಸಿದರು.

ಇನ್ನು ಬಿಜೆಪಿ ನಾಯಕರಾದ ಪ್ರಕಾಶ ತಪಶೆಟ್ಟಿ, ಕುಮಾರಗೌಡ ಜನಾಲಿ, ವಿ.ಪ. ಸದಸ್ಯ ಹನುಮಂತ ನಿರಾಣಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ನಾಯಕರ ನಿರ್ಧಾರದಂತೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಬಹುತೇಕ ನಿರ್ದೇಶಕರು ನಮ್ಮನ್ನು ಬೆಂಬಲಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿಯವುದು ನಿಶ್ಚಿತ ಎಂದರು.

ಕೋರ್ಟ್ ತೀರ್ಪಿನ ಬಳಿಕ ಫಲಿತಾಂಶ ಪ್ರಕಟ
ಚುನಾಯಿತ 13, ಅಪೇಕ್ಸ್ ಬ್ಯಾಂಕ್‌ನಿಂದ ಡಿಸಿಸಿಗೆ ನಾಮ ನಿರ್ದೇಶನಗೊಂಡ ನಿರ್ದೇಶಕರ ಮತ 1, ಸಹಕಾರಿ ಸಂಘಗಳ ಉಪ ನಿಬಂಧಕ ಮತ 1, ಸರ್ಕಾರದಿಂದ ಪ್ರತ್ಯೇಕವಾಗಿ ನಾಮ ನಿರ್ದೇಶನಗೊಂಡ ಪ್ರತ್ಯೇಕ 1 ಮತ ಸೇರಿ ಒಟ್ಟು 16 ಮತಗಳು ಇದ್ದವು. ಈ ಪೈಕಿ ವಿಜಯಾನಂದ ಕಾಶಪ್ಪನವರ ಗೈರು ಉಳಿದಿದ್ದರಿಂದ 15 ಮತಗಳು ಚಲಾವಣೆಗೊಂಡವು. ಹೈಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವ ಕಾರಣ ಸರ್ಕಾರದಿಂದ ನಿರ್ದೇಶಕ ಸ್ಥಾನಕ್ಕೆ ನೇಮಕಗೊಂಡಿರುವ ಸಿದ್ದನಗೌಡ ಪಾಟೀಲ ಅವರ 1 ಮತವನ್ನು ಹಾಗೂ ಉಳಿದ 14 ಮತಗಳನ್ನು ಪ್ರತ್ಯೇಕವಾಗಿ ಇರಿಸಲಾಯಿತು. ಧಾರವಾಡ ಹೈಕೋರ್ಟ್‌ನಲ್ಲಿ ಬುಧವಾರ ವಿಚಾರಣೆ ನಡೆಸಲಿದ್ದು, ಅಂತಿಮವಾಗಿ ಕೋರ್ಟ್ ನಿರ್ದೇಶನ ನೀಡಿದ ಬಳಿಕ ಮತ ಏಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ ಎಂದು ಹೇಳಲಾಗಿದೆ.

StartFragment

ಬಾಗಲಕೋಟೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಚುನಾವಣೆ, ಧಾರವಾಡ ಹೈಕೋರ್ಟ್, ಬಿಜೆಪಿ, ಕಾಂಗ್ರೆಸ್, ಬಸವೇಶ್ವರ ಬ್ಯಾಂಕ್ , ಪ್ರಕಾಶ ತಪಶೆಟ್ಟಿ, Bagalkot, District Central Cooperative Bank, Election, Dharwad High Court, BJP, Congress, Basaveshwara Bank, Prakasha Tapashetti,

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net