ಡಿಸಿಸಿ ಗದ್ದುಗೆಗೆ ತೀವ್ರ ಜಿದ್ದಾಜಿದ್ದಿ

DCC BANK
Published on

ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದ್ದು, ಯಾರಿಗೆ ಗದ್ದುಗೆ ಎನ್ನುವ ಕುತೂಹಲ ಗದಿಗೆದರಿದೆ.

ಒಂದು ಕಡೆಗೆ ಪಕ್ಷದ ಹಿಡಿತಕ್ಕೆ ಬ್ಯಾಂಕ್ ಅಧಿಕಾರ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆದಿದ್ದರೆ ಮತ್ತೊಂದು ಕಡೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಆಯಾ ಪಕ್ಷಗಳ ನಿರ್ದೇಶಕರಲ್ಲಿ ತೆರೆಯ ಹಿಂದಿನ ಆಟಗಳು ಜೋರಾಗಿ ನಡೆದಿವೆ.

ನವಂಬರ್ 17 ರಂದು ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಚುನಾವಣೆ ನಿಗದಿ ಆಗಿದೆ. ಒಟ್ಟು 13 ಚುನಾಯಿತ ನಿರ್ದೇಶಕರು ಹಾಗೂ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಜಿಲ್ಲಾ ಸಹಕಾರಿ ಇಲಾಖೆ ಪ್ರಬಂಧಕ, ಸರ್ಕಾರದಿಂದ ನೇಮಕ ಆಗಿರುವ ನಾಮನಿರ್ದೇಶನ ಸದಸ್ಯ ಸೇರಿ ಒಟ್ಟು 16 ಮತಗಳು ಚಲಾವಣೆ ಆಗಲಿದ್ದು, ಅಧಿಕಾರ ಗದ್ದುಗೆಗೆ 9 ಮತಗಳ ಅವಶ್ಯಕತೆ ಇದೆ. ಸದ್ಯ ಕಾಂಗ್ರೆಸ್ ಆರು ಮತ್ತು ಬಿಜೆಪಿ ಐದು ಹಾಗೂ ಇಬ್ಬರು ಸ್ವತಂತ್ರ ನಿರ್ದೇಶಕರು ಇದ್ದಾರೆ. ಹೀಗಾಗಿ ಕೈ-ಕಮಲ ಪಕ್ಷಗಳಿಗೆ ಸ್ಪಷ್ಟ ಬಹುಮತ ಇಲ್ಲವಾಗಿದ್ದು, ಜಿದ್ದಾಜಿದ್ದಿ ತೀವ್ರಗೊಳ್ಳಲು ಕಾರಣವಾಗಿದೆ.

ಏತನ್ಮಧ್ಯೆ ಸರ್ಕಾರ ನೇಮಕ ಮಾಡಿರುವ ನಾಮನಿರ್ದೇಶನ ಮಾಡಿರುವ ಸಿದ್ದನಗೌಡ ಪಾಟೀಲ ಅವರ ನೇಮಕ ಪ್ರಶ್ನಿಸಿ ಕಾಂಗ್ರೆಸ್‌ನವರು ಹೈಕೋರ್ಟ್‌ಗೆ ಹೋಗಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ಸರ್ಕಾರದ ಷೇರು ಇಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪಡೆಯಲು ಸರ್ಕಾರ ಅನಗತ್ಯವಾಗಿ ನೇಮಕ ಮಾಡಿದೆ ಎನ್ನುವುದು ವಿಪಕ್ಷ ಬಣದ ವಾದವಾಗಿದೆ. ನ್ಯಾಯಾಲಯ ಯಾವ ತೀರ್ಪು ಕೊಡುತ್ತದೆ ಎನ್ನುವುದು ಕುತೂಹಲಕ್ಕೆಡೆ ಮಾಡಿದೆ.

ಬಿಜೆಪಿ ಜಿಲ್ಲಾ ಕೋರ ಕಮಿಟಿ ಸಭೆ ?
ಏತನ್ಮಧ್ಯೆ ಶತಾಯಗತಾಯ ಈ ಸಲ ಡಿಸಿಸಿ ಬ್ಯಾಂಕ್ ಗದ್ದುಗೆ ಹಿಡಿಯಲು ತಂತ್ರ ರೂಪಿಸುತ್ತಿರುವ ಬಿಜೆಪಿ ಶುಕ್ರವಾರ ಇದೇ ವಿಚಾರವಾಗಿ ಜಿಲ್ಲಾ ಕೋರ್ ಕಮೀಟಿ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಜಿಲ್ಲೆಯ ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕೈ-ಕಮಲದಲ್ಲಿ ಪೈಪೋಟಿ
ಇನ್ನು ಸರ್ಕಾರದ ನೇಮಕ ಅಂತಿಮವಾದಲ್ಲಿ 9 ಮತಗಳ ಅಗತ್ಯ ಇದ್ದು, ಬಿಜೆಪಿಯಲ್ಲಿ ಐವರು ಹಾಗೂ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಜಿಲ್ಲಾ ಪ್ರಬಂಧಕ, ಸರ್ಕಾರದ ನಾಮನಿರ್ದೇಶನ ಸದಸ್ಯ ಸೇರಿ 8 ಮತಗಳು ಆಗಲಿದ್ದು, ಇನ್ನೊಂದು ಮತದ ಅವಶ್ಯಕತೆ ಇದೆ. ಇಬ್ಬರು ಸ್ವತಂತ್ರ ನಿರ್ದೇಶಕರು ಇದ್ದು, ಅವರಲ್ಲಿ ಒಬ್ಬರನ್ನು ಸೆಳೆಯುವ ಕಸರತ್ತುಗಳು ನಡೆದಿವೆ. ಇತ್ತ ಕಾಂಗ್ರೆಸ್‌ನಲ್ಲಿ ಆರು ನಿರ್ದೇಶಕರು ಇದ್ದು, ಇಬ್ಬರು ಸ್ವತಂತ್ರರನ್ನು ಸೆಳೆದಲ್ಲಿ ಅವರು 8 ಮತಗಳಾಗುತ್ತವೆ. ಅಲ್ಲಿಯೂ ಒಂದು ಮತದ ಅವಶ್ಯಕತೆ ಇದೆ. ಹಾಗೊಂದು ವೇಳೆ ಸರ್ಕಾರದ ನಾಮನಿರ್ದೇಶನ ಸದಸ್ಯತ್ವ ಏನಾದರೂ ರದ್ದಾದಲ್ಲಿ ಒಟ್ಟು ಮತದಾರರು 15 ಜನರು ಆಗಲಿದ್ದು, ಅಧಿಕಾರ ಹಿಡಿಯಲು ಎಂಟು ಮತಗಳು ಬೇಕು. ಬಿಜೆಪಿಗೆ ಒಬ್ಬ ಸ್ವತಂತ್ರ ನಿರ್ದೇಶಕ ಬೆಂಬಲಿಸಿದರೂ ಅಧಿಕಾರಕ್ಕೆ ಬರುವ ಸಾಧ್ಯತೆ ನಿಶ್ಚಳವಾಗಿದೆ. ಆದರೆ, ಸ್ವತಂತ್ರರು ತಮಗೆ ಬೆಂಬಲ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಇರುವ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಎನ್ನುವ ವಿಶ್ವಾಸದಲ್ಲಿ ಇದೆ. ಇದೀಗ ಸರ್ಕಾರದ ನಾಮನಿರ್ದೇಶನ ಸದಸ್ಯನ ನೇಮಕ ಕಾಂಗ್ರೆಸ್‌ಗೆ ನಿದ್ದೆಗೆಡೆಸಿದೆ.

ಎರಡು ಕಡೆಗೆ ಆಕಾಂಕ್ಷಿಗಳು
ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಪ್ರಬಲ ಆಕಾಂಕ್ಷಿ ಇದ್ದಾರೆ. ಅಲ್ಲದೆ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಾಗಲಕೋಟೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇಂದು ನಡೆಯುವ ಕೋರ್ ಕಮೀಟಿ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲೂ ಸಹ ಮಾಜಿ ಸಚಿವ ಅಜಯಕುಮಾರ ಸರನಾಯಕ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಕಾಂಕ್ಷಿಗಳಾಗಿದ್ದಾರೆ. ಸ್ವತಂತ್ರ ನಿರ್ದೇಶಕರಾಗಿರುವ ಕುಮಾರ ಜನಾಲಿ ಹಾಗೂ ಮುರುಗೇಶ ಕಡ್ಲಿಮಟ್ಟಿ ಅವರು ಯಾವ ಕಡೆಗೆ ನಗೆ ಬೀರುತ್ತಾರೋ ಆ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಗಲಿದ್ದು, ಉಪಾಧ್ಯಕ್ಷ ಸ್ಥಾನ ಸ್ವತಂತ್ರ ಅಭ್ಯರ್ಥಿಗೆ ಕೊಡುಗೆ ಎನ್ನುವುದು ಕೇಳಿ ಬರುತ್ತಿರುವ ಮಾತುಗಳು.

ಡಿಸಿಸಿ ಬ್ಯಾಂಕ್‌ನಲ್ಲಿ ಸರ್ಕಾರದ ಷೇರನ್ನು ವಾಪಸ್ ಮಾಡಲಾಗಿದೆ. ಹೀಗಾಗಿ ನಾಮನಿರ್ದೇಶನ ಮಾಡುವ ಅವಶ್ಯಕತೆ ಇರಲಿಲ್ಲ. ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ. ಅಧಿಕಾರ ಪಡೆಯಲು ಬಿಜೆಪಿ ನಿಯಮ ಉಲ್ಲಂಘಿಸಿ ನಾಮನಿರ್ದೇಶನ ಮಾಡಿದೆ. ಇದನ್ನು ಪ್ರಶ್ನಿಸಿ ನಮ್ಮವರು ಕೋರ್ಟ್‌ಗೆ ಹೋಗಿದ್ದಾರೆ.
-ಎಸ್.ಜಿ. ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net