ಡಿಸಿಸಿ ಬ್ಯಾಂಕ್ ಗೋಲ್ಮಾಲ್ ಬಯಲು ಮಾಡುವೆ

Vijayanand Kashappanavar
Published on

ಬಾಗಲಕೋಟೆ: ಪ್ರತಿಷ್ಠಿತ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಭಾರಿ ಪ್ರಮಾಣದಲ್ಲಿ ಗೋಲ್ಮಾಲ್ ಆಗಿದ್ದು, ಅವೆಲ್ಲವನ್ನು ಬಯಲು ಮಾಡುವೆ ಎಂದು ಬ್ಯಾಂಕ್ ನಿರ್ದೇಶಕ ವಿಜಯಾನಂದ ಕಾಶಪ್ಪನವರ ಗುಡುಗಿದ್ದಾರೆ.

ಜಿಲ್ಲೆಯ ರಬಕವಿ- ಬನಹಟ್ಟಿಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ ಅವರು, ಬೆಳಗ್ಗೆ ಬ್ಯಾಂಕ್‌ನಲ್ಲಿ ಗಲಾಟೆ ಬಗ್ಗೆ ವಿವರ ನೀಡಿದ ಅವರು, ಬ್ಯಾಂಕ್‌ನಿಂದ ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟಿರುವ ಸಾಲ ಕಾನೂನು ಪ್ರಕಾರ ಇಲ್ಲ ಎಂದು ಹೇಳಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ 115 ಕೋಟಿ ರೂ. ಸಾಲ ತೆಗೆದಿದ್ದಾರೆ. ಸಾಲ ಹಾಗೂ ಬಡ್ಡಿ ಸೇರಿ 150 ಕೋಟಿ ರೂ. ಆಗಿದೆ. ತಳೇವಾಡ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಈ ಬಗ್ಗೆ ಇಂದಿನ ಸಭೆಯಲ್ಲಿ ನಾನು ಮಾಹಿತಿ ಕೋರಿದೆ. ಕೊಡಲು ಬರಲ್ಲ ಎಂದು ಹೇಳಿದ್ದಾರೆ. ನಾನು ನಿರ್ದೇಶಕ ಇದ್ದು, ಲಿಖಿತವಾಗಿ ಮಾಹಿತಿ ಕೇಳುತ್ತೇನೆ, ಕೊಡದೆ ಇದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ನ ಅನೇಕ ಸಕ್ಕರೆ ಕಾರ್ಖಾನೆಗಳು ನಮ್ಮ ಬ್ಯಾಂಕ್‌ನಿಂದ ನಡೆದಿವೆ. ಸಕ್ಕರೆ ಕಾರ್ಖಾನೆಗೆ ಸಾಲ ಕೊಡುವಂಥದ್ದು ಕಾನೂನಿನಲ್ಲಿ ಇಲ್ಲ. ಆದಾಗ್ಯೂ ಸಾವಿರಾರು ಕೋಟಿ ರೂ. ಕೊಟ್ಟಿದ್ದಾರೆ. ಇದೆಲ್ಲವನ್ನು ಬಯಲಿಗೆ ತರುತ್ತೇನೆ. ನನ್ನ ಮೊದಲ ಗುರಿ ರನ್ನ ಫ್ಯಾಕ್ಟರಿ ಅಕ್ರಮ ಬಯಲುಗೊಳಿಸುವುದಾಗಿದೆ ಎಂದರು.

ರಾಮಣ್ಣ ತಳೇವಾಡ ಇದೇ ಕಾರಣಕ್ಕೆ ಅಜಯಕುಮಾರ ಸರನಾಯಕ ಅವರಿಗೆ ಮತ ಹಾಕಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ಮತ ಹಾಕಲು ಏನು ಕಾರಣ ಇತ್ತು. ಆ ಮೂಲಕ ತಮ್ಮ ಸಾಲ ಮುಚ್ಚಿಹಾಕುವ ತಂತ್ರ ಮಾಡಿದ್ದಾರೆ. ಹಾಗೆಯೇ ಬಿಟ್ಟರೆ ಬ್ಯಾಂಕ್ ಮುಳುಗಿಸಿ ಬಿಡುತ್ತಾರೆ. ಅದಕ್ಕೆ ನಾನು ಅವಕಾಶ ಕೊಡಲ್ಲ. ಇವರ ಯಾವ ಶಕ್ತಿಗೂ ನಾನು ಬಗ್ಗುವುದಿಲ್ಲ. ಇದು ರೈತರ ಬ್ಯಾಂಕ್, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಯಾರ ಯಾರ ಬಣ್ಣ ಏನು ಇದೆ ಎಂದು ಬಹಿರಂಗಗೊಳಿಸುವೆ ಎಂದು ಬಾಂಬ್ ಸಿಡಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net