

ಬಾಗಲಕೋಟೆ: ದೇಶದಲ್ಲಿಯೇ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಬಳಕೆಯಾಗದೇ ಉಳಿಯುತ್ತಿರುವ ವಿದ್ಯುತ್ ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರದ ಬದ್ಧವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಲವಿದ್ಯುತ್, ಪವನಶಕ್ತಿ, ಸೋಲಾರ, ಥರ್ಮಲ್ ಹಾಗೂ ಓಜೋನ್‌ದಿಂದ 32 ಸಾವಿರ ಮೇಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ಆದರೇ ಅಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿಲ್ಲ. ಹೀಗಾಗಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೇವೆ. ವಿದ್ಯುತ್ ಶೇಖರಣೆ, ಸರಜರಾಜಿನಲ್ಲಿ ಸದ್ಯಕ್ಕೆ ಇರುವ ವ್ಯವಸ್ಥೆ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೋಟೆನಾಡಿಗೆ 500 ಕೋಟಿ ರೂ.
ಜಿಲ್ಲೆಗೆ ಒಟ್ಟು 100 ವಿದ್ಯುತ್ ಉಪ ಕೇಂದ್ರಗಳ ಅವಶ್ಯಕತೆ ಇದ್ದು, ಈಗಾಗಲೇ ಜಿಲ್ಲೆಯಲ್ಲಿ 69 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 21 ಕೇಂದ್ರಗಳಿಗೆ ಮಂಜೂರಾತಿ ದೊರೆತಿದ್ದು, ಇನ್ನು 10 ವಿದ್ಯುತ್ ಕೇಂದ್ರಗಳ ಅವಶ್ಯಕತೆ ಇರುವದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಮುಂದಿನ 25 ವರ್ಷಗಳವರೆಗೆ ವಿದ್ಯುತ್ ಸಮಸ್ಯೆ ಇರುವದಿಲ್ಲ. ಇನ್ನು ಜಿಲ್ಲೆಯಲ್ಲಿ ಹೊಸದಾಗಿ 21 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ 280 ಕೋಟಿ ರೂ., ವಿದ್ಯುತ್ ವ್ಯವಸ್ಥೆಯಲ್ಲಿ ಸುಧಾರಣೆಗೆ 220 ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ ವಿದ್ಯುತ್‌ಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 500 ಕೋಟಿ ರೂ.ಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದ ಅವರು, ಈ ಕಾಮಗಾರಿಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಐಟಿ ಸೆಕ್ಟರಗಳ ಸಂಖ್ಯೆ ಹೆಚ್ಚಾಗಿರುವದರಿಂದ ಶೇ.100 ರಷ್ಟು ಲೋಡ್ ಆಗುತ್ತಿದೆ. ಇದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸಿಸ್ಟಮ್ ವ್ಯವಸ್ಥೆ ಬದಲಾವಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಲೋಕಾಪುರದಲ್ಲಿ 400 ಕೆವಿ ಸ್ಟೇಷನ್ ನಿರ್ಮಾಣ ಕಾರ್ಯ ನಡೆದಿದ್ದು, ಇಂತಹ ದೊಡ್ಡ ಪ್ರಮಾಣದ ವಿದ್ಯುತ್ ಸ್ಟೇಷನ್ ನಿರ್ಮಾಣವಾಗುತ್ತಿರುವುದು ರಾಜ್ಯದಲ್ಲಿಯೇ ಬಹಳ ಕಡಿಮೆ. ಈ ಕೆವಿ ಕೇಂದ್ರದಿಂದ ವಿದ್ಯುತ್ ಸಂಪರ್ಕದಲ್ಲಿ ಏನಾದರೂ ತಾಂತ್ರಿಕ ತೊಂದರೆಯಾದಲ್ಲಿ ಬೇರ ಸಂಪರ್ಕ ಜೋಡನೆಗೆ ಅವಕಾಶವಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವದಿಲ್ಲ ಎಂದರ.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನಿರಾಜ ವಿ.ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ 86 ಪೈಕಿ 78ಕ್ಕೆ ವಿದ್ಯುದೀಕರಣಗೊಳಿಸಲಾಗಿದೆ. 2019-20ರಲ್ಲಿ ಉಂಟಾದ ಪ್ರವಾಹದಿಂದ ವಿದ್ಯುತ್ ಇಲಾಖೆಗೆ ಒಟ್ಟು 39.10 ಕೋಟಿ ರೂ.ಗಳ ನಷ್ಟವಾಗಿದೆ. ಈ ಪೈಕಿ 31.28 ಕೋಟಿ ರೂ.ಗಳ ಪರಿಹಾರ ಬಿಡುಗಡೆಯಾಗಿರುತ್ತದೆ. ವಿಫಲಗೊಂಡ 4474 ಪರಿವರ್ತಕಗಳ ಪೈಕಿ 4448 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ಜಿಲ್ಲೆಯಲ್ಲಿ 35440 ಅನಧಿಕೃತ ಪಂಪಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಶೀಘ್ರ ಸಂಪರ್ಕ ಯೋಜನೆಯಡಿ ಬಂದ 2954 ಅರ್ಜಿಗಳ ಪೈಕಿ 114 ಮಾತ್ರ ಬಾಕಿ ಇರುತ್ತವೆ. ದೀನದಯಾಳ ಉಪಾದ್ಯಾಯ ಗ್ರಾಮಜ್ಯೋತಿ ಯೋಜನೆಯಡಿ 8287 ಮನೆಗಳಿಗೆ ಮತ್ತು ಪ್ರಧಾನಮಂತ್ರಿ ಸಹಜ್ ಬಿಜ್ಲಿಹರಘರ ಯೋಜನೆಯಡಿ 11404 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಕಾಂಬಳೆ, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಮಂಜುನಾಥ, ಬೆಂಗಳೂರಿನ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ವಿಶ್ವನಾಥ ನಾಯಕ ಉಪಸ್ಥಿತರಿದ್ದರು.
- ಆನಂದ ನ್ಯಾಮಗೌಡ ಶಾಸಕ ಜಮಖಂಡಿ
EndFragment