

ಬಾಗಲಕೋಟೆ: ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಕಟ್ಟಡಗಳ ದುರಸ್ತಿ ಮತ್ತು ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅಧಿಕಾರಿಗಳು ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಶುಕ್ರವಾರ 2021-22ನೇ ಸಾಲಿನ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತರೆ ಕೆಲಸವಾಗುವುದಿಲ್ಲ. ಗ್ರಾಮಗಳಿಗೆ, ಕಾಲುವೆಗಳ ಅಚ್ಚುಕಟ್ಟು ಪ್ರದೇಶ, ರೈತರ ಜಮೀನುಗಳಿಗೆ ಭೇಟಿ ನೀಡಬೇಕು. ಸರ್ಕಾರದ ಆಶೋತ್ತರಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರ ಮನೆಗೆ ನಲ್ಲಿಗಳ ಮೂಲಕ ನೀರು ಕೊಡುವ ಉದ್ದೇಶದಿಂದ ಜಲ ಮಿಷನ್ ಯೋಜನೆ, ನಲ್ ಸೇ ಜಲ್ ನಂತಹ ಮಹತ್ವ ಪೂರ್ಣ ಯೋಜನೆ ಜಾರಿಗೊಳಿಸಿದೆ. ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಡಿಪಿಆರ್ ಸಿದ್ಧಪಡಿಸುವಾಗ ಜಲ ಮೂಲಗಳ ಬಗ್ಗೆ ನಿಖರತೆ ಹೊಂದಬೇಕು. ವರ್ಷ ಪೂರ್ತಿ ನದಿಯಿಂದಲೇ ನೀರು ಪಡೆದುಕೊಳ್ಳುವ ಹಾಗೇ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರವಾಹ, ಮಳೆಯಿಂದ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಯಾರು ಕೆಲಸ ಶುರು ಮಾಡಿಲ್ಲವೋ ಅಂತಹ ಫಲಾನುಭವಿಗಳು 15 ದಿನದೊಳಗೆ ಮನೆ ಆರಂಭಿಸದಿದ್ದರೆ ಪರಿಹಾರ ವಾಪಸ್ ಪಡೆಯಲಾಗುವುದು ಅಂತ ನೋಟಿಸ್ ಕೊಡಿ ಎಂದು ಕಾರಜೋಳ ಸೂಚನೆ ನೀಡಿದರು.
ಈ ವೇಳೆ ಅಧಿಕಾರಿ ಗಣಪತಿ ಪಾಟೀಲ ಮಾತನಾಡಿ, ಐಹೊಳೆ ಗ್ರಾಮದಲ್ಲಿ 112 ಮನೆಗಳಿಗೆ ಹಾನಿಯಾಗಿದ್ದವು, ಮೊದಲ ಕಂತಿನ ಪರಿಹಾರ ನೀಡಲಾಗಿದೆ. ಫಲಾನುಭವಿಗಳು ಮನೆಗಳ ಪುನರ್ ನಿರ್ಮಾಣಕ್ಕೆ ಪ್ರಾಚ್ಯವಸ್ತು ಇಲಾಖೆಯವರು ಅಡ್ಡಿಪಡಿಸುತ್ತಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಹೆದ್ದಾರಿ ನಿರ್ವಹಣೆ ಮಾಡಿ
ಜಿಲ್ಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆ ಸರಿಯಾಗಿ ಆಗಿಲ್ಲ. ಅನೇಕ ಕಡೆ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಬಾಗಲಕೋಟೆ ನಗರದಲ್ಲಿ ಹಾಯ್ದು ಹೋಗುವ ರಾಯಚೂರು-ಬೆಳಗಾವಿ ಹೆದ್ದಾರಿಯ ಶಿರೂರದಿಂದ ಗದ್ದನಕೇರಿ ಕ್ರಾಸ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಪಘಾತಗಳು ಸಂಭವಿಸುತ್ತಿವೆ. ಫೆ.15 ರೊಳಗೆ ಎಲ್ಲ ಹೆದ್ದಾರಿಗಳ ಸುಧಾರಣೆ ಮಾಡಬೇಕು ಎಂದು ಡಿಸಿಎಂ ತಿಳಿಸಿದರು.
ಒತ್ತುವರಿ ತೆರವುಗೊಳಿಸಿ
ಪ್ರವಾಹ, ಮಳೆಯಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಜಿಲ್ಲೆಯ ರಸ್ತೆಗಳು ಹಾನಿಯಾಗಿವೆ. ಅವುಗಳ ಸುಧಾರಣೆಗೆ ಮೊದಲ ಹಂತದಲ್ಲಿ ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಗೆ 53 ಕೋಟಿ ರೂ. ಅನುದಾನ ದೊರೆತಿದೆ. ಅಧಿಕಾರಿಗಳು ಬೇಗನೆ ಕಾಮಗಾರಿ ಆರಂಭಿಸಿ ಬೇಸಿಗೆ ಮುಗಿಯುವುದರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಲೋಕೋಪಯೋಗಿ ಇಲಾಖೆ ರಸ್ತೆಗಳು ಬಹಳಷ್ಟು ಒತ್ತುವರಿಯಾಗಿವೆ. ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಶಾಸಕ ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ. ಭೂಬಾಲನ್ ಇತರರು ಇದ್ದರು.
ಕಾಲುವೆಗಳ ಸುಧಾರಣೆಗೆ ಒತ್ತು ಕೊಡಿ
ಜಿಲ್ಲೆಯಲ್ಲಿ ಘಟಪ್ರಭಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಇದ್ದು, ಜಲಾಶಯ ಭರ್ತಿಯಾದರೂ ಈವರೆಗೆ ಬಲದಂಡೆ ಕಾಲುವೆಗಳಲ್ಲಿ ನೀರು ಹರಿದಿಲ್ಲ. ಕಾಲುವೆ ಸಂಪೂರ್ಣ ಹಾಳಾಗಿ ಹೋಗಿವೆ. ನೀರಾವರಿ ನಿಗಮದ ಗದ್ದನಕೇರಿ ವಿಭಾಗದ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಹೀಗೆ ಆಗಿದೆ ಎಂದು ಎಇಇ ಎ.ಬಿ. ಚಪ್ಪರ ಅವರನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡರು.
ಘಟಪ್ರಭಾ ಜಲಾಶಯದಿಂದ ಹಿಡಿದು ಬಲದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಹಂತದ 201 ಕಿ.ಮೀ. ವರೆಗೂ ಕಾಲುವೆ ಪಕ್ಕದ ರಸ್ತೆಯಲ್ಲಿ ಸಂಚರಿಸಿ ವಾಸ್ತವ ವರದಿ ಕೊಡಿ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಬಲದಂಡೆ ಕಾಲುವೆಯಲ್ಲಿ ನೀರು ಹರಿಸಿದಲ್ಲಿ ತಮಗೆ ರೈತರು ಕೃತಜ್ಞತೆ ಸಲ್ಲಿಸುತ್ತಾರೆ ಎಂದರು.
ಹೊರಗುತ್ತಿಗೆ ಖಾಸಗಿ ಏಜೆನ್ಸಿ ರದ್ದು ಮಾಡಿ
ಜಿಲ್ಲೆಯಲ್ಲಿ ಪಶು ಸಂಗೋಪನೆ ಇಲಾಖೆಯಲ್ಲಿ 86 ಕ್ಕೂ ಹೆಚ್ಚು ಜನ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿ ಪಡೆದಿರುವ ಮಾತಾ ಸಂಸ್ಥೆಯವರು ನೌಕರರಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲೆಯಲ್ಲಿ ಯಾವುದೇ ಇಲಾಖೆಯಲ್ಲಿ ಖಾಸಗಿ ಏಜೆನ್ಸಿಗಳಿದ್ದರೂ ರದ್ದು ಮಾಡಬೇಕು. ಮಾತಾ ಸಂಸ್ಥೆಯ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರದ ಸಂಸ್ಥೆಯಾಗಿರುವ ಕಿಯೋನಿಕ್ಸ್ ಮೂಲಕ ಹೊರಗುತ್ತಿಗೆ ನೌಕರರನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಹಾಗೂ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಎಂ.ಎಸ್. ಅಂಗಡಿ ಅವರಿಗೆ ಕಾರಜೋಳ ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆ ಮುಕ್ತಗೊಳಿಸಿ
ಡಿಎಚ್‌ಒ ಡಾ. ಅನಂತ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಬಂದಿರುವ ಅನುದಾನ ಮೂಲಕ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಲ್ಯಾಬ್‌ಗಳಿಗೆ ಅಗತ್ಯ ಯಂತ್ರ ಒದಗಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ 8 ಸಕ್ರಿಯ ಪ್ರಕರಣಗಳು ಇವೆ. ಹೀಗಾಗಿ ಕೋವಿಡ್ ಆಸ್ಪತ್ರೆ ಹೆಸರು ಬದಲಾಯಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾಮಾನ್ಯ ಆಸ್ಪತ್ರೆಯನ್ನಾಗಿ ಘೋಷಿಸಬೇಕು. ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಈ ವೇಳೆ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌ನಿಂದ ಮುಕ್ತಗೊಳಿಸಿ. ಸಕ್ರಿಯ ಪ್ರಕರಣಗಳ ಆಧರಿಸಿ ಆಸ್ಪತ್ರೆಯಲ್ಲಿ ಕೋವಿಡ್ ಪ್ರತ್ಯೇಕ ವಿಭಾಗ ಆರಂಭಿಸಿ ಎಂದರು. ಆದರೆ, ಡಿಸಿಎಂ ಗೋವಿಂದ ಕಾರಜೋಳ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ನೀವೇ ಉತ್ತರಾಧಿಕಾರಿ!
ಸಭೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ನೀರಾವರಿ ಇಲಾಖೆಗೆ ಸೇರಿದ 3 ಕೋಟಿ ರೂ. ಎರಡು ನೀರಾವರಿ ಕಾಮಗಾರಿಗೆ ಆರಂಭಿಸಬೇಕು ಎನ್ನುವ ವಿಷಯ ಪ್ರಸ್ತಾಪ ಮಾಡಲಾಯಿತು. ಈ ವೇಳೆ ಭೂಮಿಪೂಜೆಯನ್ನು ಕ್ಷೇತ್ರದ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಮಾಡಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ, ‘ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರೇ ಬಾದಾಮಿ ಕ್ಷೇತ್ರದ ಉತ್ತರಾಧಿಕಾರಿ. ಅವರಿಂದ ಭೂಮಿಪೂಜೆ ಮಾಡಿಸಿ’ ಎಂದು ನಗೆ ಚಟಾಕಿ ಹಾರಿಸಿದರು.