ಕನ್ನಡದಲ್ಲಿ ಸಾಫ್ಟ್‌ವೇರ್‌ಗಳ ಅಭಿವೃದ್ಧಿ

BKT-1-1
Published on

ಬಾಗಲಕೋಟೆ: ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಅಂತ ಪ್ರತಿಯೊಬ್ಬ ಕನ್ನಡಿಗ ತಾಯ್ನುಡಿ, ತಾಯ್ನಡನ್ನು ಪ್ರೀತಿಸಬೇಕು. ಆಧುನಿಕ ತಂತ್ರಜ್ಞಾನ ನಾಗಾಲೋಟಕ್ಕೆ ತಕ್ಕಂತೆ ಕನ್ನಡ ಭಾಷೆಯ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿ, ಎಲ್ಲ ಕ್ಷೇತ್ರಗಳಿಗೆ ಕನ್ನಡ ಭಾಷೆ ಬಳಕೆಯಾಗುವಂತೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಣ ನೆರವೇರಿಸಿ ಮಾತನಾಡಿದ ಅವರು, ನಾಡಿನ ಸಮಗ್ರ ಅಭಿವೃದ್ಧಿಗೆ, ನೆಲ, ಜಲ ಭಾಷೆ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಂಗೀತ ಕ್ಷೇತ್ರದ ಬಗ್ಗೆ ಯುವ ಪೀಳಿಗೆಗೆ ಉತ್ತೇಜನ ನೀಡಲು ಸಾಫ್ಟವೇರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಜಿಲ್ಲೆಗೊಂದು ಸಾಹಿತ್ಯ ಭವನ, ರಂಗ ಮಂದಿರ ನಿರ್ಮಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು 1000 ರೂ.ದಿಂದ 1500 ರೂ.ಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಜಿಲ್ಲೆಯಲ್ಲಿ 130 ರಂಗ ಮಂದಿರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಕಾವೇರಿಯಿಂದ ಗೋದಾವರಿ ವರೆಗೆ ಕನ್ನಡದ ಅರಸರು ಆಳ್ವಿಕೆ ನಡೆಸಿದ್ದಾರೆ. ಕನ್ನಡದ ಜನಪದರು, ವಚನಕಾರರು, ದಾಸರು, ಕೀರ್ತನಕಾರರು, ಕವಿಗಳು ಮತ್ತು ಸೂಫಿ ಸಂತರು ಕನ್ನಡ ಭಾಷೆ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಕನ್ನಡಿಗರ ವಿಶಾಲ ವ್ಯಕ್ತಿತ್ವ ಉಲ್ಲೇಖಗೊಂಡಿದೆ. ಚಾಲುಕ್ಯರು ಕನ್ನಡ ಭಾಷೆಯಲ್ಲೇ ಆಡಳಿತ ನಡೆಸಿ ಕನ್ನಡ ಭಾಷೆಯನ್ನು ಸಶಕ್ತಗೊಳಿಸಿದರು. ಸ್ವಾತಂತ್ರೃ ಹೋರಾಟಕ್ಕೆ ಕನ್ನಡರಿಗರ ಕೊಡುಗೆ ಅಪಾರ. ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರದ ಅರಸರು, ಮಹಮ್ಮದೀಯ ಅರಸರು, ಮೈಸೂರು ಅರಸರು ಬಿಟ್ಟು ಹೋದ ಪಳಿಯುಳಿಕೆ, ಶಾಸನ, ಕೋಟೆ, ಸ್ಮಾರಕ ಇಂದಿಗೂ ಕನ್ನಡವನ್ನು ಸಾಕ್ಷಿಕರಿಸುತ್ತವೆ. ಅವುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಕನ್ನಡ ಭಾಷೆ, ರಂಗಭೂಮಿ, ಸಾಹಿತ್ಯಕ್ಕೆ ಬಾಗಲಕೋಟೆ ಜಿಲ್ಲೆ ಕೊಡುಗೆ ಅವಿಸ್ಮರಣೀಯ. ಕೆರೂರು ವಾಸುವೇದ ಆಚಾರ್ಯರು, ಕಂದಗಲ್ ಹನುಮಂತರಾಯ, ವಾಮನರಾವ ಮಾಸ್ತರರು, ಪಿ.ಬಿ.ಧುತ್ತರಗಿ, ಕೆ.ಎನ್.ಸಾಳುಂಕೆ, ಎಸ್.ಆರ್. ಭಸ್ಮೆ ಮುಂತಾದ ನಾಟಕಕಾರರನ್ನು ಹಾಗೂ ಹಂದಿಗನೂರ ಸಿದ್ರಾಮಪ್ಪ, ಅಮೀರಬಾಯಿ ಕರ್ನಾಟಕಿ, ಗೋಹರ್‌ಬಾಯಿ, ಯಲ್ಲೂಬಾಯಿ ಇಂತಹ ಪ್ರಮುಖ ಕಲಾವಿದರು ನಮ್ಮ ಜಿಲ್ಲೆಯವರು ಎನ್ನುವುದು ಅಭಿಮಾನದ ಸಂಗತಿ ಎಂದು ಬಣ್ಣಿಸಿದರು.

ಕನ್ನಡ ಕಲಾ ಜಗತ್ತಿಗೆ ಜಾನಪದ ವೃತ್ತಿ ರಂಗಭೂಮಿಯ ಶ್ರೀಕೃಷ್ಣ ಪಾರಿಜಾತಕ್ಕೆ ಜಿಲ್ಲೆಯ ಕಲಾವಿದರ ಸೇವೆ ಅನನ್ಯ. ಕೌಜಲಗಿ ನಿಂಗಮ್ಮ ಮಹಾಲಿಂಗಪುರ ಕಾರ್ಯಕ್ಷೇತ್ರ ಮಾಡಿಕೊಂಡು ರಂಗಭೂಮಿಯಲ್ಲಿ ಬಣ್ಣ ಹಚ್ಚಿದ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಲೋಕಾಪುರದ ದೇಶಪಾಂಡೆ, ಟಕ್ಕಳಕಿ ವಿಠ್ಠಲರಾವ್ ಅವರಂತಹ ಹತ್ತಾರು ಕಲಾವಿದರು ಶ್ರೀಕೃಷ್ಣ ಪಾರಿಜಾತಕ್ಕೆ ಮೆರುಗು ತಂದುಕೊಟ್ಟರು. ಉತ್ತರ ಕರ್ನಾಟಕದ ಬಯಲಾಟ ಕಲಾ ಪ್ರಕಾರ ಪೋಷಿಸುವ ಉದ್ದೇಶದಿಂದ ಬಾಗಲಕೋಟೆ ನಗರದಲ್ಲಿ ಬಯಲಾಟ ಅಕಾಡೆಮಿ ಪ್ರಾರಂಭಿಸಲಾಗಿದೆ. ಇನ್ನು ಕೋವಿಡ್ ವೈರಸ್ ಹಾಗೂ ನೈಸರ್ಗಿಕ ವಿಕೋಪದಿಂದ ಬಾಗಲಕೋಟೆ ಜಿಲ್ಲೆಯ ಜನತೆ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಸರಳವಾಗಿ ಆಚರಿಸಲಾಗಿದೆ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎನ್.ಗಂಗಪ್ಪ ಸೇರಿ ಇತರರು ಉಪಸ್ಥಿತರಿದ್ದರು.

ಸಾಧಕರಿಗೆ, ಸೇನಾನಿಗಳಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ 21 ಜನ ಮಹನೀಯರನ್ನು ಸನ್ಮಾನಿಸಲಾಯಿತು. ಸಿದ್ದು ಧುತ್ತರಗಾಂವಿ, ಜಿ.ಎಚ್.ವೆಂಕಟೇಶ (ಪತ್ರಿಕಾ ರಂಗ), ಚಂದ್ರಶೇಖರ ಹಲಕಾಟವಟಿ, ಪ್ರಿಯಾಂಕಾ ಭಜಂತ್ರಿ(ಸಂಗೀತ), ಹನುಮಪ್ಪ ಭಜಂತ್ರಿ, ಸಂಗವ್ವ ಪೂಜಾರಿ, ಮಲ್ಲಕುಸಾಬ ನದಾಫ್, ಮಲ್ಲಪ್ಪ ಹೂಗಾರ (ಜಾನಪದ), ಮಂಜುನಾಥ ಸಂಗನಾಳ (ನಾಟಕ), ಜಗದೀಶ ಭಜಂತ್ರಿ(ಚಿತ್ರಕಲೆ), ಪ್ರಹ್ಲಾದ್ ಭೋಯಿ, ಮೆಹೂಬೂಬ ಆಗ್ರಾ, ಬಸಪ್ಪ ಪಾಣಿಶೆಟ್ಟಿ (ಸಮಾಜ ಸೇವೆ), ಅರವಿಂದ ಮಂಗಳೂರು (ಸಹಕಾರಿ), ಆನಂದ ಮೊಕಾಶಿ, ಯಲ್ಲಪ್ಪ ಲೋಗಾಂವಿ(ಕೃಷಿ), ಹನುಮಪ್ಪ ಎಮ್ಮಟ್ಟಿ(ಸಾಹಿತ್ಯ), ಗೋವಿಂದ ಶೇಷಗಿರಿ ಬಾಡಗಂಡಿ, ಸುರೇಶ ಕಾಳಪ್ಪ ಬಡಿಗೇರ (ವಿಜ್ಞಾನ), ಯಲ್ಲವ್ವ ಲೆಂಕ್ಕಮ್ಮನವರ, ಶ್ರೀಶೈಲ ಗಣಾಚಾರಿ(ಚೌಡಕಿ ಪದ) ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪೊಲೀಸ್ ಇಲಾಖೆ ಸಿಬ್ಬಂದಿ ವಿ.ಬಿ.ಹಾದಿಮನಿ, ಜಿ.ಎಸ್.ಸುನಗದ, ಜಗದೀಶ ಹಡಪದ ಸೇರಿ 27 ಜನ ವಿವಿಧ ಇಲಾಖೆಯ ಕರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net