ನನ್ನ ಗೆಲುವು ಶತಃಸಿದ್ಧ

bkt 4-2
Published on

ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಚುನಾವಣೆಯ ಪಟ್ಟಣ ಮತ್ತು ಪತ್ತಿನ ಸಹಕಾರಿ ಕ್ಷೇತ್ರದ ನನ್ನ ಎದುರಾಳಿ ಅಭ್ಯರ್ಥಿ ಶಿವಾನಂದ ಉದಪುಡಿ ಸೋಲಿನ ಭೀತಿಯಿಂದ ಹತಾಶರಾಗಿ ಸುಳ್ಳು ಆರೋಪ ಮಾಡುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸುವ ವ್ಯರ್ಥ್ಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಕಾಶ ತಪಶೆಟ್ಟಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಈ ಚುನಾವಣೆಯಲ್ಲಿ ನಾನು ಬಸವೇಶ್ವರ ಬ್ಯಾಂಕ್ ಮೂಲಕ ಸ್ಪರ್ಧಿಸಿದ್ದೇನೆ. ಈ ಕಾರಣಕ್ಕೆ ಬ್ಯಾಂಕ್ ನಿರ್ದೇಶಕ ಮಂಡಳಿ ಸದಸ್ಯರು, ಬ್ಯಾಂಕ್‌ನ ನಿವೃತ್ತ ಸಿಬ್ಬಂದಿ, ಹಿತೈಷಿಗಳು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೆಯೇ ಬ್ಯಾಂಕ್‌ನ ಸಿಬ್ಬಂದಿ ಈ ಚುನಾವಣೆಯಲ್ಲಿ ಹೊಸ ನಿಯಮಗಳು ಜಾರಿ ಆಗಿದ್ದರಿಂದ ಸಹಕಾರಿ ಸಂಸ್ಥೆಗಳ ವಿನಂತಿ ಮೇರೆಗೆ ಕಾಗದ ಪತ್ರಗಳನ್ನು ತಯಾರಿಸಲು ಯೋಗ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ಸೇವೆಗೆ ಎಲ್ಲರೂ ಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ನಮ್ಮ ಬ್ಯಾಂಕ್‌ನ ನಿತ್ಯದ ವಹಿವಾಟಿಗೆ ಯಾವ ಅಡ್ಡಿ ಆಗಿಲ್ಲ. ಬೇಕಾದರೆ ಬಂದು ನೋಡಲಿ ಎಂದು ಸವಾಲು ಹಾಕಿದ್ದಾರೆ.

ನನ್ನ ಎದುರಾಳಿ ಅಭ್ಯರ್ಥಿಯಂತೆ ಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಸ್ಯಾನಿಟೈಸರ್ ವಿತರಣೆಗೆ ದುರುಪಯೋಗ ಪಡಿಸಿಕೊಂಡಿಲ್ಲ. ತಮ್ಮ ಮಾತು ಕೇಳಿಲ್ಲ ಅಂತ ಅವರ ವಿರುದ್ಧ ವರ್ಗಾವಣೆಯ ದ್ವೇಷ ರಾಜಕಾರಣವನ್ನು ಸಹ ನಾನು ಮಾಡಿಲ್ಲ ಎಂದು ಉದಪುಡಿ ಅವರಿಗೆ ಟಾಂಗ್ ನೀಡಿದ್ದಾರೆ.

2 ಲಕ್ಷ ರೂ. ಸಹಾಯಧನ ಮಂಜೂರು
ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕ ಇದ್ದಾಗ ಬ್ಯಾಂಕ್‌ನಲ್ಲಿ ಹೆಚ್ಚಿನ ಠೇವಣಿ ಸಹಕಾರಿ ಬ್ಯಾಂಕ್/ಪತ್ತಿನ ಸಹಕಾರಿ ಸಂಘಗಳಿಂದ ಇದೆ ಎಂದು ವಾದಿಸಿ ಇವುಗಳ ಕಟ್ಟಡ ನಿರ್ಮಾಣದ ಸಹಾಯಧನವನ್ನು ಒಂದು ಲಕ್ಷದಿಂದ ಎರಡು ಲಕ್ಷ ರೂ.ಗೆ ಹೆಚ್ಚಿಸುವಂತೆ ಮಾಡಿದ್ದೆ. ಶುದ್ಧ ನೀರಿನ ಘಟಕದ ಸ್ಥಾಪನೆಗೆ ಎರಡು ಲಕ್ಷ ರೂ. ಸಹಾಯಧನ ನನ್ನ ಪ್ರಸ್ತಾವನೆಯ ಮೇರೆಗೆ ಮಂಜೂರಾಗಿದೆ. ಈ ಬಗ್ಗೆ ದಾಖಲೆಗಳನ್ನು ನೋಡಬಹುದು. ಆದರೆ, ನನ್ನ ಎದುರಾಳಿ ಅಭ್ಯರ್ಥಿ ಈ ಮಿತಿಯನ್ನು ಐದು ಲಕ್ಷ ರೂ. ಮಾಡಿಸುವುದಾಗಿ ಹೇಳಿದವರು. ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿಸಬೇಕಿತ್ತಲ್ಲ? ಯಾಕೆ ಮೌನವಾಗಿದ್ದರು? ಎಂದು ಪ್ರಕಾಶ ತಪಶೆಟ್ಟಿ ಪ್ರಶ್ನಿಸಿದ್ದಾರೆ.

ಮತದಾರರು ಮತ ನೀಡುವ ಭರವಸೆ
ಅನರ್ಹರಾಗಿದ್ದ ಮತದಾರರಿಗೆ ಮತಾಧಿಕಾರ ಕೊಡಿಸಲು ನಾನು ಪ್ರಯತ್ನಿಸಿ ಒಟ್ಟು 142 ಸಂಸ್ಥೆಗಳಿಗೆ ಮತದಾನದ ಹಕ್ಕನ್ನು ಕೊಡಿಸಿದ್ದು, ಈ ಬಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೇನೆ. ಹೀಗೆ ಅರ್ಹತೆ ಪಡೆದ ಮತದಾರರು ಸೇರಿ ಎಲ್ಲ ಮತದಾರರು ಸಹ ನಿಶ್ಚಿತವಾಗಿ ಮತ ಕೊಡುವ ಭರವಸೆ ಕೊಟ್ಟಿದ್ದಾರೆ. ಸತ್ಯವನ್ನು ಯಾವಾಗಲೂ ಮರೆಮಾಚಲು ಸಾಧ್ಯವಿಲ್ಲ. ಸತ್ಯ ಸತ್ಯವೇ, ಸುಳ್ಳು ಸುಳ್ಳೇ. ಸತ್ಯಮೇವ ಜಯತೆ ಎಂದು ಎದುರಾಳಿ ಅಭ್ಯರ್ಥಿ ಶಿವಾನಂದ ಉದಪುಡಿ ಅವರನ್ನು ಚುಚ್ಚಿದ್ದಾರೆ. ನನ್ನ ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರು ಇದ್ದಾರೆ. ಅವರು ನನ್ನ ಕೈ ಬಿಡುವ ಪ್ರಶ್ನೆಯೆ ಇಲ್ಲ. 250 ಮತ ಪಡೆಯುವ ಮೂಲಕ ನನ್ನ ಗೆಲುವು ನಿಶ್ವಿತ. ಎದುರಾಳಿ ಎಷ್ಟೇ ದಾರಿ ತಪ್ಪಿಸುವ ಕೆಲಸಕ್ಕೆ ಮಾಡಿದರೂ ಮತದಾರರು ಕಿವಿಗೊಡದೆ ತಮ್ಮನ್ನು ಬೆಂಬಲಿಸಬೇಕು ಎಂದು ಪ್ರಕಾಶ ತಪಶೆಟ್ಟಿ ಮನವಿ ಮಾಡಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net