

ಅಶೋಕ ಶೆಟ್ಟರ
ಬಾಗಲಕೋಟೆ: ಸಾವಿರಾರು ಕೋಟಿ ರೂ. ಒಡೆತನದ ಬಾಗಲಕೋಟೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಯ ಗದ್ದುಗೆ ಗುದ್ದಾಟ ತೆರೆಯ ಹಿಂದೆ ಜೋರಾಗಿ ನಡೆದಿದೆ. ಕೈ- ಕಮಲ ಪಕ್ಷಗಳು ಅಧಿಕಾರದ ಚುಂಗು ಹಿಡಿಯಲು ರಣತಂತ್ರಗಳನ್ನು ರೂಪಿಸುತ್ತಿವೆ.
ಕಳೆದ ಐದು ವರ್ಷ ಪೂರ್ಣ ಬಹುಮತದೊಂದಿಗೆ ಕೈ ವಶದಲ್ಲಿದ್ದ ಆಡಳಿತ ಚುಕ್ಕಾಣಿ ಈ ಸಾರಿ ಕಮಲ ಪಾಳಯ ಕಿತ್ತುಕೊಳ್ಳುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ರಾಜಕೀಯ ಮೇಲಾಟಗಳು ಕೊನೆಯ ಕ್ಷಣದಲ್ಲಿ ಯಾವ ತಿರುವು- ಮುರುವು ಪಡೆಯುತ್ತವೆ ಎನ್ನುವುದು ಸದ್ಯಕ್ಕೆ ನಿಲುಕದಂತಾಗಿದೆ.
ಈಗಾಗಲೇ ಬ್ಯಾಂಕ್‌ನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ಯಾವ ಮಟ್ಟದಲ್ಲಿ ಪೈಪೋಟಿ ಏರ್ಪಟ್ಟಿತ್ತು ಎನ್ನುವುದು ಜಗಜ್ಜಾಹೀರು. ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅದಕ್ಕಿಂತಲೂ ಹೆಚ್ಚಿನ ಪೈಪೋಟಿ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಜಿಲ್ಲೆಯ ಮಟ್ಟಿಗೆ ರಾಜಕೀಯ ಶಕ್ತಿ ಕೇಂದ್ರದಂತಾಗಿರುವ ಡಿಸಿಸಿ ಬ್ಯಾಂಕ್ ಅಧಿಕಾರವನ್ನು ಶತಾಯಗತಾಯ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸಿರುವುದು ಬಹಿರಂಗ ಸತ್ಯ.
ಕಳೆದ ಐದು ವರ್ಷ ಕಾಂಗ್ರೆಸ್ ಪಕ್ಷದ ಬಿಗಿ ಹಿಡಿತದಲ್ಲಿದ್ದ ಡಿಸಿಸಿ ಬ್ಯಾಂಕ್ ಅಧಿಕಾರವನ್ನು ಈ ಸಲ ಉಳಿಸಿಕೊಳ್ಳುವುದು ಕೈ ಪಕ್ಷಕ್ಕೆ ಅಷ್ಟು ಸುಲಭದ ಮಾತಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರೂ ಸ್ಪಷ್ಟ ಬಹುಮತಕ್ಕೆ ಬೇಕಿದ್ದ ಸಂಖ್ಯೆ ಕೈ ಬತ್ತಳಿಕೆಯಲ್ಲಿ ಇಲ್ಲ. ಇದರಿಂದ ರಾಜ್ಯದಲ್ಲಿ ಅಧಿಕಾರರೂಢ ಪಕ್ಷವಾಗಿರುವ ಬಿಜೆಪಿ ಸುಲಭವಾಗಿ ಅಧಿಕಾರ ಗದ್ದುಗೆ ಏರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಅಧ್ಯಕ್ಷ ಸ್ಥಾನದ ಪೈಪೋಟಿ ತೀವ್ರಗೊಂಡು ಹಿರಿಯ ಮುಖಂಡರ ಮನಸ್ಸುಗಳೇನಾದರೂ ಚಂಚಲವಾದಲ್ಲಿ ಅದು ‘ಕೈ’ಗೆ ಜಾರಬೇಕಷ್ಟೆ.
ಬಂಡಾಯಕ್ಕೆ ಬಾಗಬೇಕು
ಡಿಸಿಸಿ ಬ್ಯಾಂಕ್‌ನ 13 ನಿರ್ದೇಶಕರ ಸ್ಥಾನಗಳ ಪೈಕಿ ಸದ್ಯ 6 ಸ್ಥಾನ ಕಾಂಗ್ರೆಸ್, 5 ಸ್ಥಾನ ಬಿಜೆಪಿ ಹಾಗೂ 2 ಸ್ಥಾನ ಸ್ವತಂತ್ರ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಇವರ ಜತೆಗೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹಾಗೂ ಜಿಲ್ಲಾ ಸಹಕಾರಿ ಇಲಾಖೆ ಪ್ರಬಂಧಕ ಇವರಿಬ್ಬರ ಮತದಾನವೂ ಇರುವುದರಿಂದ ಒಟ್ಟು ಬಲ 15 ಆಗಲಿದೆ. ಇದರಿಂದ ಅಧಿಕಾರ ಗದ್ದುಗೆ ಹಿಡಿಯಲು 8 ಮತಗಳ ಬೆಂಬಲ ಅಗತ್ಯವಾಗಿದೆ. ಸದ್ಯ ಎರಡು ಪಕ್ಷಗಳಿಗೆ ಆ ಬೆಂಬಲ ಇಲ್ಲವಾಗಿದೆ. ಬಿಜೆಪಿಯ ಐವರ ಸದಸ್ಯರ ಜತೆಗೆ ಅಪೆಕ್ಸ್ ಹಾಗೂ ಜಿಲ್ಲಾ ಪ್ರಬಂಧಕರ ಬೆಂಬಲ ದೊರೆಯುವುದು ಖಚಿತ ಆಗಿದ್ದರಿಂದ ಅವರಿಗೆ ಒಂದು ಸ್ಥಾನದ ಅಗತ್ಯತೆ ಇದೆ. ಹೀಗಾಗಿ ಆ ಒಂದು ಯಾರು? ಈಗಾಗಲೇ ಪಕ್ಷದ ಬೆಂಬಲ ಇಲ್ಲದಿದ್ದರೂ ಬಂಡಾಯ ಬಾವುಟ ಹಾರಿಸಿ ವಿಜಯದ ನಗೆ ಬೀರಿರುವ ಬಾದಾಮಿಯ ಕುಮಾರ ಜನಾಲಿ ಅವರನ್ನು ಸೆಳೆದುಕೊಳ್ಳುವುದು ಬಹುತೇಕ ನಿಶ್ಚಿತ. ಇದರಿಂದ ಅವರಿಗೆ ಉಪಾಧ್ಯಕ್ಷ ಸ್ಥಾನದ ಗಿಫ್ಟ್ ಕೊಟ್ಟರೂ ಅಚ್ಚರಿ ಇಲ್ಲ. ಆದರೆ, ಕುಮಾರ ಜನಾಲಿಯ ಸ್ಪರ್ಧೆಗೆ ವಿರೋಧದ ಗೋಡೆ ನಿರ್ಮಿಸಿದ್ದ ಬಾದಾಮಿ ಬಿಜೆಪಿಯ ಪ್ರಭಾವಿ ನಾಯಕ ಮತ್ತೆ ಅವರಿಗೆ ಅಡ್ಡಗಾಲು ಹಾಕಿ ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ ಮುರುಗೇಶ ಕಡ್ಲಿಮಟ್ಟಿಯನ್ನು ಸೆಳೆದರೂ ಆ ಉಪಾಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವುದು ಬಿಜೆಪಿಗೆ ಅನಿವಾರ್ಯವಾಗಲಿದೆ. ಆದರೆ, ಕುಮಾರ ಜನಾಲಿ ಬಿಜೆಪಿಯವರೇ ಆಗಿದ್ದರಿಂದ ಅವರನ್ನೇ ಸೆಳೆಯುವುದು ಬಹುತೇಕ ಫಿಕ್ಸ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಧ್ಯಕ್ಷ ಸ್ಥಾನಕ್ಕೆ ಯಾರು ?
ಇನ್ನು ಬಿಜೆಪಿ ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಸದ್ಯದ ಸ್ಥಿತಿಯಲ್ಲಿ ಒಂದ್ಹೆಜ್ಜೆ ಮುಂದಿದೆ. ಹೀಗಾಗಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯೂ ಇದೆ. ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಗೋವಿಂದ ಕಾರಜೋಳ ಅವರ ಆಪ್ತ ಎನ್ನುವುದು ಒಂದು ಪ್ಲಸ್ ಪಾಯಿಂಟ್. ಹಣ ಬಲ, ಜಾತಿಬಲ, ಪಕ್ಷದಲ್ಲಿ ಬಲಾಢ್ಯ ಎನ್ನುವ ಪೂರಕ ಅಂಶಗಳು ಅವರ ಬೆನ್ನಿಗಿವೆ. ಇದರ ಜತೆಗೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸಹ ಸತತ ಎರಡನೇ ಸಲ ಗೆದ್ದಿರುವುದು ಅವರು ಸಹ ಆಕಾಂಕ್ಷಿ ಎನ್ನಲಾಗುತ್ತಿದೆ. ಇವರಲ್ಲದೆ, ತೇರದಾಳ ಶಾಸಕ ಸಿದ್ದು ಸವದಿ ಸಹ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಆಗಿದ್ದರಿಂದ ಅವರು ಸಹ ತೆರೆಯ ಹಿಂದಿನ ಆಟಕ್ಕೆ ಅಣಿಯಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೆ, ಸಹಕಾರಿ ಕ್ಷೇತ್ರದಲ್ಲಿ ತೀವ್ರ ಅನುಭವ ಇರುವ ಹಾಗೂ ಕಳೆದ ಮೂರು ದಶಕಗಳಿಂದ ಬಸವೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಸಂಸ್ಥೆಯನ್ನು ಮಾದರಿಯನ್ನಾಗಿಸಿರುವ ಪ್ರಕಾಶ ತಪಶೆಟ್ಟಿ ಅವರು ಕಮಲ ಪಕ್ಷದಲ್ಲಿ ಇರುವುದರಿಂದ ಮುಖಂಡರೇನಾದರೂ ಅವರಿಗೆ ಗದ್ದುಗೆ ಗಿಫ್ಟ್ ಕೊಟ್ಟರೂ ಅಚ್ಚರಿ ಇಲ್ಲ. ಆದರೆ, ಅಧ್ಯಕ್ಷ ಸ್ಥಾನದ ಮೇಲೆ ದೊಡ್ಡ ಕಣ್ಣಿಟ್ಟಿರುವ ರಾಮಣ್ಣ ತಳೇವಾಡ ಈಗಾಗಲೇ ಅಧಿಕಾರದ ಚುಂಗಿಗಾಗಿ ಎಲ್ಲ ಕಸರತ್ತುಗಳನ್ನು ತೀವ್ರಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಕೈಗೆ ಒಲಿದರೆ ಯಾರು?
ಇನ್ನು ಬಿಜೆಪಿಯಲ್ಲಿ ಹೆಚ್ಚು ಕಡಿಮೆ ಆಗಿ ಅಥವಾ ಕೈ ಪಕ್ಷದ ತಂತ್ರಗಳೇನಾದರೂ ಫಲಿಸಿದಲ್ಲಿ ಮತ್ತೆ ಡಿಸಿಸಿ ಗದ್ದುಗೆ ಕಾಂಗ್ರೆಸ್ ಪಾಲಾಗಬಹುದು. ಹೀಗಾದಲ್ಲಿ ಅಲ್ಲಿ ಪ್ರಮುಖ ಆಕಾಂಕ್ಷಿ ಮತ್ತು ಬಹುತೇಕ ಗದ್ದುಗೆ ಮೇಲೆ ಟವೆಲ್ ಇರುವುದು ಮಾಜಿ ಸಚಿವ, ಹಿಂದಿನ ಅವಧಿಯಲ್ಲಿ ಐದು ವರ್ಷ ಅಧ್ಯಕ್ಷರಾಗಿದ್ದ ಅಜಯಕುಮಾರ ಸರನಾಯಕ ಹೆಸರು ಮುಂಚೂಣಿಯಲ್ಲಿ ಇದೆ.
ಪಕ್ಷದ ಆರು ಜನರು ನಿರ್ದೇಶಕರಾಗಿದ್ದು, ಇವರಿಗೆ ಅಧಿಕಾರ ಸಿಗಲು ಇನ್ನೂ ಎರಡು ಸ್ಥಾನಗಳ ಅವಶ್ಯಕತೆ ಇದೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಇರುವುದರಿಂದ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾದಲ್ಲಿ ಮತ್ತೆ ಡಿಸಿಸಿ ಅಧಿಕಾರ ಕೈಪಾಲಾಗುವ ಲಕ್ಷಣಗಳು ಇವೆ. ಅದು ಅಷ್ಟು ಸುಲಭದ ಮಾತಂತೂ ಅಲ್ಲ. ಆದರೆ, ರಾಜಕೀಯ ಮೇಲಾಟ ಯಾವ ಕ್ಷಣದಲ್ಲಿ ಏನಾಗುತ್ತೋ ಹೇಳಲು ಆಗಲ್ಲವಲ್ಲ. ಹೀಗಾಗಿ ಕೈ ಪಾಳಯದಲ್ಲೂ ಆ ಆಸೆ ಇನ್ನೂ ಜೀವಂತವಾಗಿದೆ.
ಸ್ವತಂತ್ರರ ನಿಲುವು ನಿಗೂಢ
ಡಿಸಿಸಿ ಬ್ಯಾಂಕ್‌ನ ಅಧಿಕಾರ ಯಾರೇ ಹಿಡಿದರೂ ಆ ಗದ್ದುಗೆಗೆ ಏಣಿ ಮಾತ್ರ ಸ್ವತಂತ್ರ ಅಭ್ಯರ್ಥಿ ಆಗಿರುತ್ತಾರೆ. ಇಬ್ಬರಲ್ಲಿ ಮುರುಗೇಶ ಕಡ್ಲಿಮಟ್ಟಿ ಕಾಂಗ್ರೆಸ್ ಪಕ್ಷದವರು ಇದ್ದರೆ ಕುಮಾರ ಜನಾಲಿ ಬಿಜೆಪಿ ಮುಖಂಡ. ಸದ್ಯಕ್ಕೆ ಆ ಇಬ್ಬರೂ ತಮ್ಮ ಬೆಂಬಲ ಯಾರಿಗೆ ಎಂದು ಇನ್ನೂ ಬಹಿರಂಗಗೊಳಿಸಿಲ್ಲ. ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
EndFragment