ಕೋಟೆನಗರಿಯಲ್ಲಿ ಜಾತ್ರಾ ಸಡಗರ

BKT 201
Published on

ಬಾಗಲಕೋಟೆ: ಕಳೆದ ಮೂರು ದಶಕಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಕೋಟೆನಗರಿಯ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಚಾಲನೆ ದೊರೆತಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಅದ್ದೂರಿಯಾಗಿ ಮೆರವಣಿಗೆ ಜರುಗಿತು.

ನಗರದ ಕಿಲ್ಲಾಗಲ್ಲಿಯ ಗ್ರಾಮ ದೇವತೆ ದೇವಸ್ಥಾನದ ಆವರಣದಿಂದ ಆರಂಭವಾದ ಮೆರವಣಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಪಂಕಾ ಮಸೀದಿ, ಹಳಪೇಟ, ಶಾರದಾ ಪ್ರಿಟಿಂಗ್ ಪ್ರೇಸ್, ಟೆಂಗಿನಮಠ, ಬಿವಿವಿ ಸಂಘದ ಮುಖ್ಯದ್ವಾರ, ಕಾಲೇಜು ರಸ್ತೆ ಮೂಲಕದ ಬಸವೇಶ್ವರ ವೃತ್ತ ತಲುಪುತ್ತಿದ್ದಂತೆ ಜಯ-ಘೋಷಣೆಗಳು ಮುಗಿಲು ಮುಟ್ಟಿದವು. ನಂತರ ಎಂ.ಜಿ ರಸ್ತೆ, ವಲ್ಲಭಾಯಿ ಚೌಕ, ದುರ್ಗಾದೇವಿ ದೇವಸ್ಥಾನ, ಪಾದಗಟ್ಟಿ ಮೂಲಕ ಮರಳಿ ದೇವಸ್ಥಾನಕ್ಕೆ ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತ ಸಮೂಹ ದೇವಿ ಭವ್ಯ ಮೆರವಣಿಗೆ ಕಣ್ಣು ತುಂಬಿಕೊಂಡರು.

ಆಕರ್ಷಿಸಿದ ಮೆರವಣಿಗೆ..
ನಾನಾ ಬಣ್ಣದ ಸಾಂಪ್ರದಾಯಿಕ ಇಳಕಲ್ಲ ಸೀರೆ ತೊಟ್ಟಿದ್ದ ಸಾವಿರಕ್ಕೂ ಹೆಚ್ಚು ಸುಮಂಗಲಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಿಸಿತು. ಪುರುಷರು ರುಮ್ಮಾಲು ಧರಿಸಿ ಭಾಗವಹಿಸಿದ್ದು ಉತ್ತರ ಕರ್ನಾಟಕದ ಶೈಲಿಯ ಗಮ್ಯತೆ ಎದ್ದು ಕಾಣಿತು. ಆಂಜನೇಯ, ಶ್ರೀರಾಮ, ಸೀತಾಮಾತೆ ವೇಷಧಾರಿಗಳ ಗೊಂಬೆ ಕಲಾವಿದರು ಹೆಜ್ಜೆ ಹಾಕಿದರು. ಅವರೊಂದಿಗೆ ಸೆಲ್ಪಿ ತೆಗದುಕೊಳ್ಳಲು ನೂರಾರು ಜನ ಮುಗಿ ಬಿದ್ದರು. ಮಹಿಳಾ ಕಲಾವಿದರ ಡೊಳ್ಳು ಕುಣಿತ, ಜಾಂಜ್ ಪಾತಾಕ, ಕರಡಿ ಮಜಲು, ವೀರಗಾಸೆ, ಬ್ಯಾಂಡ್ ನಾದ ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು. ಹೂವಿನಿಂದ ಅಲಂಕೃತಗೊಂಡ ಟ್ರಾಕ್ಟರ್‌ನಲ್ಲಿ ಶ್ರೀ ದೇವಿಯು ವಿರಾಜಮಾನಗಳಾಗಿ ಕಂಗೊಳಿಸಿದಳು. ಮೆರವಣಿಗೆ ಆಗಮಿಸುತ್ತಿದ್ದಂತೆ ದೇವಿಯ ನಮಸ್ಕರಿಸುವ ದೃಶ್ಯ ಸಾಮಾನ್ಯವಾಗಿತ್ತು. ನಾಲ್ಕು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

ವಿ.ಪ ಸದಸ್ಯ ಪಿ.ಎಚ್.ಪೂಜಾರ, ಜಾತ್ರಾ ಸಮಿತಿ ಗೌರವ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಸಮಿತಿಯ ಅಧ್ಯಕ್ಷೃ ಬಂಡೇರಾವ ಸರದೇಸಾಯಿ, ಮುಖಂಡರಾದ ಸಂಗಯ್ಯ ಸರಗಣಾಚಾರಿ, ಸುರೇಶ ಕುದರಿಕಾರ, ನಾಗರಾಜ ಹದ್ಲಿ, ಗುಂಡುರಾವ ಶಿಂಧೆ, ಸದಾನಂದ ನಾರಾ, ಕಾಂತು ಪತ್ತಾರ, ಶ್ರೀನಾಥ ಸಜ್ಜನ, ಸಂಗಪ್ಪ ಸಜ್ಜನ, ರಮೇಶ ಕೋಟಿ, ಶ್ರೀಶೈಲ ಗಿರಗಾಂವಿ, ಪರಶುರಾಮ ದಾವಣಗೇರಿ, ಮಲ್ಲಿಕಾರ್ಜುನ ಶಾಹಾಪುರ, ತಾಣಾಜಿ ಜಮಖಂಡಿ, ಮಂಜುನಾಥ ಬಡಿಗೇರ, ಅಶೋಕ ಪವಾರ, ಸುರೇಶ ಮಜ್ಜಗಿ, ಸುಧಾ ದೇಸಾಯಿ, ಶಶಿಕಲಾ ಮಜ್ಜಗಿ, ಪಾರ್ವತಿ ಬಡಿಗೇರ ಉಪಸ್ಥಿತರಿದ್ದರು.

ನಗೆ ಹಬ್ಬ ಕಾರ್ಯಕ್ರಮ
ಡಿ. 21 ರಂದು ಮಂಗಳವಾರ ಸಂಜೆ 6 ಗಂಟೆಗೆ ಗದ್ದನಕೇರಿಯ ಪುಟ್ಟರಾಜ ಜ್ಞಾನ ಜ್ಯೋತಿ ಸಂಸ್ಥೆಯಯಿಂದ ಜಾನಪದ ರಸಸಂಜೆ, ಗಂಗಾವತಿ ಪ್ರಾಣೇಶ ಅವರ ತಂಡದಿಂದ ನಗೆ ಹಬ್ಬ ನಡೆಯಲಿದೆ. ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸಲಿದ್ದಾರೆ. ಸೇವಾ ಸಮಿತಿಯ ಅಧ್ಯಕ್ಷೃ ಬಂಡೇರಾವ ಸರದೇಸಾಯಿ ಅಧ್ಯಕ್ಷೃತೆ ವಹಿಸಲಿದ್ದಾರೆ. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕಾನಿಪ ಜಿಲ್ಲಾಧ್ಯಕ್ಷೃ ಸುಭಾಸ ಹೊದ್ಲೂರ ಸೇರಿದಂತೆ ಇತರರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net