

ಬಾಗಲಕೋಟೆ: ಪ್ರಸಕ್ತ ಸಾಲಿಗೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಸಲ್ ಬಿಮಾ (ವಿಮಾ) ಯೋಜನೆಯಡಿ ಹೋಬಳಿ, ಗ್ರಾ.ಪಂ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಿಗೆ ನೋಂದಣಿ ಪ್ರಕ್ರಿಯೆ ಪಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ರೈತರ ವಿವಿಧ ಬೆಳೆ ವಿಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗೆ ಒಳಪಡಿಸುವ ವಿವಿಧ ಬೆಳೆಗಳಿಗೆ ಬೆಳೆಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರು ಬ್ಯಾಂಕ್‌ಗಳಿಗೆ ಘೋಷಣೆಗಳನ್ನು ನಿಗದಿಪಡಿಸಿದ ದಿನಾಂಕಗಳೊಳಗಾಗಿ ಸಲ್ಲಿಸಬೇಕಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ಜಿಲ್ಲೆಗೆ ಬಜಾಜ್ ಅಲಿಯಾಂಜ್ ಇನ್ಸೂರೆನ್ಸ್ ಕಂಪನಿ ಸಂಸ್ಥೆ ಆಯ್ಕೆಯಾಗಿದ್ದು, ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅರ್ಹ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಇತರೆ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಈ ಯೋಜನೆ ಬಿತ್ತನೆ ಕ್ಷೇತ್ರ ಅನುಸಾರವಾಗಿ ವಿಮಾ ಪರಿಹಾರ ವಿಧಾನ ಆಧರಿಸಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಮಾತ್ರ ವಿಮಾ ಮಾಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಕಡಲೆ(ಮ.ಆ) ಬೆಳೆಗೆ ವಿಮೆಗೆ ಒಳಪಡಿಸಲು ಕೊನೆಯ ದಿನ ಡಿಸೆಂಬರ 31, ಜೋಳ (ಮ.ಆ)ಕ್ಕೆ ನವೆಂಬರ 17, ಗೋವಿನ ಜೋಳಕ್ಕೆ (ನೀ)ಕ್ಕೆ ಡಿಸೆಂಬರ 16, ಸೂರ್ಯಕಾಂತಿ (ಮ.ಆ) ಬೆಳೆಗೆ ನವೆಂಬರ 30, ಗೋದಿ (ನೀ) ಡಿಸೆಂಬರ 16 ಕೊನೆಯ ದಿನವಾಗಿದೆ. ಹೋಬಳಿ ಮಟ್ಟದ ಬೆಳೆಗಳಾದ ಕಡಲೆ (ಮ.ಆ, ನೀ) ಡಿಸೆಂಬರ 31, ಹುರುಳಿ (ಮ.ಆ), ಜೋಳ (ನೀ, ಮ.ಆ), ಅಗಸೆ (ಮ.ಆ), ಕುಸುಬೆ (ಮ.ಆ)ಗೆ ನವೆಂಬರ 17, ಗೋವಿನ ಜೋಳ(ನೀ)ಗೆ ಡಿಸೆಂಬರ 16, ಸೂರ್ಯಕಾಂತಿ (ನೀ, ಮ.ಆ) ನವೆಂಬರ 30, ಗೋದಿ (ನೀ) ಡಿಸೆಂಬರ 16, ಗೋದಿ (ಮ.ಆ) ನವೆಂಬರ 30 ಹಾಗೂ ಈರುಳ್ಳಿ (ನೀ)ಗೆ ವಿಮೆ ಒಳವಡಿಸಲು ಡಿಸೆಂಬರ 16 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿಗೆ ಗ್ರಾಮ ಪಂಚಾಯತ ಮಟ್ಟದ ಬೆಳೆಗಳಾದ ಸೂರ್ಯಕಾಂತಿ (ನೀ)ಗೆ ಮಾರ್ಚ 1, 2021, ಹೋಬಳಿ ಮಟ್ಟದ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ (ನೀ) ಬೆಳೆಗೆ ಮಾರ್ಚ 1, 2021 ಕೊನೆಯ ದಿನವಾಗಿರುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
EndFragment