ಕುಡಿದ ಮತ್ತಿನಲ್ಲಿ ಸ್ವಾಬ್ ಪಡೆದ ನೌಕರ

BKT 151
Published on

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಕೋವಿಡ್ ಸ್ವಾಬ್ ಪಡೆಯುತ್ತಿದ್ದ ಜಿಲ್ಲಾ ಆಸ್ಪತ್ರೆ ನೌಕರ ಒಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲಾ ಆಸ್ಪತ್ರೆಯ ಸಾರಪ್ಪ ಮಾದರ ಎನ್ನುವ ನೌಕರ ಕುಡಿದ ಮತ್ತಿನಲ್ಲಿ ಮಾಸ್ಕ್ ಕೂಡ ಸರಿಯಾಗಿ ಧರಿಸದೆ ಸಾರ್ವಜನಿಕರಿಂದ ಸ್ವಾಬ್ ಪಡೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಬಾಗಲಕೋಟೆ ತಾಲೂಕಿನ ಸಾಳಗುಂದಿ ಗ್ರಾಮದ ಯುವಕ ಶ್ರೀಶೈಲ ಕಟಗೇರಿ ತಕ್ಷಣಕ್ಕೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅಲ್ಲದೆ, ಖುದ್ದಾಗಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಪ್ರಕಾಶ ಬಿರಾದಾರ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಈ ವಿಡಿಯೋ ಜಿಲ್ಲಾದ್ಯಂತ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ಗಂಟಲು, ಮೂಗಿನಲ್ಲಿ ದ್ರವ ಪಡೆಯುವಾಗ ಏನಾದರೂ ಸಮಸ್ಯೆ ಉಂಟಾದರೆ ಯಾರು ಜವಾಬ್ದಾರರು. ಈ ರೀತಿ ನಿರ್ಲಕ್ಷೃ ವಹಿಸಿದರೆ ಅಲ್ಲಿಗೆ ಬಂದವರಿಗೆ ಕೋವಿಡ್ ಸೋಂಕು ತಗಲುವುದು ಗ್ಯಾರಂಟಿ. ಕೂಡಲೇ ಆಸ್ಪತ್ರೆಯ ಮುಖ್ಯಸ್ಥರಿಗೆ ಲಿಖಿತವಾಗಿ ದೂರು ಕೊಟ್ಟಿದ್ದೇನೆ ಎಂದು ಶ್ರೀಶೈಲ ಕಟಗೇರಿ ಹೇಳಿದರು.

ಆಸ್ಪತ್ರೆ ಸಿಬ್ಬಂದಿ ಸಾರಪ್ಪ ಮಾದರ ಲೋಪದೋಷ ಬಗ್ಗೆ ಗಮನಕ್ಕೆ ಬಂದಿದೆ. ಇಂತಹ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಇನ್ನೂ ಸಾರಪ್ಪ ಮಾದರಿಗೆ ನೋಟಿಸ್ ನೀಡಲಾಗಿದ್ದು, ಸೂಕ್ತವಾಗಿ ಕ್ರಮ ತೆಗೆದುಕೊಳ್ಳಲಾಗುವುದು.
- ಡಾ. ಪ್ರಕಾಶ ಬಿರಾದಾರ ಜಿಲ್ಲಾ ಆಸ್ಪತ್ರೆ ಸರ್ಜನ್

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net