

ಬಾಗಲಕೋಟೆ: ಜಿಲ್ಲೆಯಲ್ಲಿ ಹೆಮ್ಮಾರಿ ಕಾಟ ಮತ್ತಷ್ಟು ಹೆಚ್ಚಾಗುತ್ತಿರುವುದರ ಜತೆಗೆ ಸಾವಿನ ಸರಣಿ ಕೂಡ ಮುಂದುವರಿದಿರುವುದು ತೀವ್ರ ಆತಂಕ ಮೂಡಿಸಿದೆ. ಶುಕ್ರವಾರ ಏಳು ಜನ ಸೋಂಕಿಗೆ ಬಲಿಯಾಗಿರುವುದು ಜಿಲ್ಲೆಯಲ್ಲಿ ಕೋವಿಡ್ ಕರಾಳ ಮುಖಕ್ಕೆ ಸಾಕ್ಷಿ.
ಶುಕ್ರವಾರ ಜಿಲ್ಲೆಯಲ್ಲಿ 199 ಜನ ಕೋವಿಡ್‌ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 661 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬಾಗಲಕೋಟೆ 255, ಬಾದಾಮಿ 94, ಬೀಳಗಿ 45, ಜಮಖಂಡಿ 131, ಮುಧೋಳ 40 ಹಾಗೂ ಹುನಗುಂದ ತಾಲೂಕಿನ 96 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 21,575 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 16,930 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಜಿಲ್ಲಾ ಕೋವಿಡ್ ಲ್ಯಾಬ್‌ನಲ್ಲಿ ಪರಿಕ್ಷಿಸಲಾಗುತ್ತಿದ್ದ 751 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 569020 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 546094 ನೆಗೆಟಿವ್ ಪ್ರಕರಣ 183 ಮೃತ ಪ್ರಕರಣ ವರದಿಯಾಗಿರುತ್ತವೆ. ಇನ್ನು 4462 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.