

ಬಾಗಲಕೋಟೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂಗೆ ಶನಿವಾರ ಕೂಡ ಉತ್ತಮ ಬೆಂಬಲ ದೊರೆಯಿತು. ನಗರ ಹಾಗೂ ಗ್ರಾಮೀಣ ಭಾಗವು ಸಂಪೂರ್ಣ ಸ್ತಬ್ಧಗೊಂಡಿತ್ತು.
ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬೀಳಗಿ, ಲೋಕಾಪುರ, ಕಲಾದಗಿ, ಕೆರೂರ, ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಕಮತಗಿ, ಅಮೀನಗಡ ಸೇರಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ನಡೆಯುವ ತರಕಾರಿ, ಹಣ್ಣು ಸಂತೆ, ಕಿರಾಣಿ ಅಂಗಡಿಗಳಲ್ಲಿ ಜನರು ಖರೀದಿ ಮುಗಿಬಿದ್ದರು. ಮಾಸ್ಕ್ ಇಲ್ಲದೆ, ಪರಸ್ಪರ ಅಂತರ ಇಲ್ಲದೆ ಮೈತಾಗಿಕೊಂಡು ಇರುವುದು ಕಂಡು ಬಂದಿತು. ಔಷಧ, ಆಸ್ಪತ್ರೆ, ಪೆಟ್ರೋಲ್ ಬಂಕ್ ಬಿಟ್ಟರೆ ಎಲ್ಲವೂ ಸ್ಥಗಿತಗೊಂಡಿದ್ದವು. ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಎಚ್ಚರಿಕೆ ಪಾಠ ಮಾಡಿದರು.
ನಿರ್ಗತಿಕ, ಭಿಕ್ಷುಕರ ಪರದಾಟ
ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ಮಾರುಕಟ್ಟೆ ಪ್ರದೇಶದಲ್ಲಿ ನಿತ್ಯವು ನಿರ್ಗತಿಕರು, ಭಿಕ್ಷುಕರು ಪ್ರಯಾಣಿಕರು, ಸಾರ್ವಜನಿಕರಿಂದ ಭಿಕ್ಷೆ ಬೇಡಿ ನಿತ್ಯದ ಅನ್ನದ ಬಟ್ಟಿಲು ತುಂಬಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಆಗಿದ್ದರಿಂದ ಹಸಿವಿನಿಂದ ಬಳಲುವಂತಾಗಿದೆ. ಕಳೆದ ವರ್ಷದಂತೆ ಈ ವರ್ಷ ಯಾರೂ ಸಹಾಯ ಹಸ್ತ ಚಾಚುತ್ತಿಲ್ಲ. ಈ ಬಗ್ಗೆ ಯಾವ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೆಲವರು ಬಿಸ್ಕತ್, ನೀರಿನ ಬಾಟಲ್ ನೀಡುತ್ತಿದ್ದಾರೆ. ಹೊಟ್ಟೆ ತುಂಬ ಊಟ ದೊರೆಯದೆ ಒದ್ದಾಡುತ್ತಿದ್ದಾರೆ. ಜಿಲ್ಲೆಯ ಹಲವೆಡೆ ನಿರ್ಗತಿಕರ, ಭಿಕ್ಷುಕರ ಯಾತನೆ ದೃಶ್ಯ ಕಣ್ಣೀರು ತರಿಸುವಂತಿದೆ.
ಮಾರುಕಟ್ಟೆ ಸ್ಥಳಾಂತರದ ಚಿಂತನೆ
ಬಾಗಲಕೋಟೆ ನಗರ ಸೇರಿ ಜಿಲ್ಲೆಯ ವಿವಿಧ ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗುತ್ತಿರುವ ಕಾರಣ ಬೇರೆ ಕಡೆ ತರಕಾರಿ ಸಂತೆ ಸ್ಥಳಾಂತರ ಮಾಡುವ ಚಿಂತನೆ ನಡೆದಿದೆ. ವಿಶಾಲವಾದ ಮೈದಾನದಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಮಾರುಕಟ್ಟೆ ಸ್ಥಾಪಿಸಲಾಗುತ್ತಿದೆ. ಹಳೇ ಬಾಗಲಕೋಟೆ ನಗರದ ತರಕಾರಿ ಸಂತೆ ಭಾನುವಾರದಿಂದ ಹಳೇ ತಹಸೀಲ್ದಾರ್ ಕಚೇರಿ ಸಮೀಪದ ಮೈದಾನದಲ್ಲಿ ನಡೆಯಲಿದೆ.