ಬೆಲೆ ಏರಿಕೆ ತಡೆಗಟ್ಟುವಲ್ಲಿ ಬಿಜೆಪಿ ವಿಫಲ

BKT 22
Published on

ಬಾಗಲಕೋಟೆ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಅಡುಗೆ ಅನೀಲ, ಇಂಧನ, ದಿನ ಬಳಕೆ ವಸ್ತುಗಳ ಬಳಕೆ ದುಪ್ಪಟ್ಟಾಗುತ್ತಿದೆ. ಬೆಲೆ ಏರಿಕೆ ತಡೆಗಟ್ಟುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸಬಕ್ ಸಾಥ್ ಸಬಕ್ ವಿಕಾಸ ನೀತಿ ಅನುಸರಿಸುತ್ತಿಲ್ಲ. ಮೋದಿ ಸರ್ಕಾರ ಸಾವಕಾರ ಸಾಥ್ ಎನ್ನುವಂತಾಗಿದೆ. ಶ್ರೀಮಂತರು, ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದೆ. 70 ವರ್ಷ ಕಾಂಗ್ರೆಸ್ ಏನು ಮಾಡಿಲ್ಲ ಎನ್ನುತ್ತಲೆ. ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ಅಂಬಾನಿ, ಅದಾನಿ ಅಂತಹವರಿಗೆ ವಿಮಾನ ನಿಲ್ದಾಣ, ರೈಲ್ವೆ ಗುತ್ತಿಗೆ ನೀಡುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಹಿಂದೆ ಕೇಂದ್ರದಲ್ಲಿ ಯುಪಿಎ ಆಡಳಿತ ವಿದ್ದಾಗ ಪೆಟ್ರೋಲ್, ಡಿಸೇಲ್ ಬೆಲೆ 1,2 ರೂ. ಏರಿಕೆಯಾದರು ಸಹ ಬಿಜೆಪಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿತ್ತು. ಇಂದು ನಿತ್ಯವು ಬೆಲೆ ಏರಿಕೆಯಾಗುತ್ತಿದ್ದರು ಬಿಜೆಪಿ ಶಾಸಕರು, ಸಚಿವರು, ಸಂಸದರು ಬಾಯಿ ಬಿಡುತ್ತಿಲ್ಲ. ತಾಲಿಬಾನಿಗಳ ಗುಂಡಿಗೆ ಆಫಗನ್ನರು ಹೆದರಿದಂತೆ ಮೋದಿಗೆ ಬಿಜೆಪಿಗರು ಬೆದರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಬಾಯಿ ಬಿಡುತ್ತಿಲ್ಲ. ಮೌನಿ ಬಾಬಾ ಆಗಿದ್ದಾರೆ ಎಂದು ವ್ಯಂಗವಾಡಿದರು.

ಕೇಂದ್ರ ಬಿಜೆಪಿ ಸರ್ಕಾರಿ ಉದ್ಯಮಿಗಳ 6 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿತು. ರೈತರು, ಕಾರ್ಮಿಕರು, ಜನ ಸಾಮಾನ್ಯರ ಪರ ಕರುಣೆ ತೋರಲಿಲ್ಲ. ಇರುವಂತಹ ಸಬ್ಸಿಡಿ ಕೂಡಾ ಕಡಿತಗೊಳಿಸಿದರು. ಜನರ ಕಷ್ಟ ಕಣ್ಣಾರೆ ನೋಡಿದರು ಕಣ್ಣು ಮುಚ್ಚಿ ಕೂಡುವುದು ತರವಲ್ಲ. ಹೀಗೆ ಮುಂದು ವರೆದಲ್ಲಿ ದೇಶವಾಸಿ ದಂಗೆ ಏಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಎಚ್.ವೈ.ಮೇಟಿ, ಮುಖಂಡರಾದ ಸುಶೀಲಕುಮಾರ ಬೆಳಗಲಿ, ಮಂಜುನಾಥ ವಾಸನದ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ ಇತರರು ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net