ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆ

BKT 13-2
Published on

ಬಾಗಲಕೋಟೆ: ಕೋವಿಡ್-19 ಹಿನ್ನೆಲೆಯಲ್ಲಿ ಜ.26 ರಂದು ಆಚರಿಸಲ್ಪಡುವ ಗಣರಾಜ್ಯೋತ್ಸವವನ್ನು ಈ ಬಾರಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಆಚರಣೆ ಕುರಿತ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಧ್ವಜಾರೋಹಣ, 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಧ್ವಜಾರೋಹಣ ನೆರವೇರಸಲಿದ್ದಾರೆ ಎಂದರು.

ಪಥ ಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್ ಗೃಹ ರಕ್ಷಕದಳ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳದವರನ್ನು ಆಹ್ವಾನಿಸಲು ತಿಳಿಸಲಾಯಿತು. ಧ್ವಜಾರೋಹಣ ವ್ಯವಸ್ಥೆ ಮಾಡಲು ಭಾರತ ಸೇವಾದಳ, ಪೊಲೀಸ್ ಇಲಾಖೆ, ತಹಸೀಲ್ದಾರ್ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿಗಳಿಗೆ ವಹಿಸಲಾಯಿತು. ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಿಸಲು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾವಾಗಿ ಧರಿಸುವ ಮೂಲಕ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅಂದು ಸ್ಯಾನಿಟೈಸರ್ ವಿತರಣೆ, ಸಿಂಪಡಣೆ ವ್ಯವಸ್ಥೆ ಕೈಗೊಳ್ಳಲಾಗುವುದು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಆರೋಗ್ಯ ಇಲಾಖೆ ಮಾಡಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.

ಶಿಷ್ಟಾಚಾರಕ್ಕೆ ಲೋಪವಾಗದಂತೆ ಧ್ವಜ ಸಂಹಿತೆಗೆ ಯಾವುದೇ ತರಹ ಅಪಚಾರವಾಗದಂತೆ ನೋಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಸ್ಟೇಜ್ ನಿರ್ಮಾಣ, ಗಣ್ಯರಿಗೆ, ಶಾಸಕರಿಗೆ, ಸಂಸದರುಗಳಿಗೆ ಹಾಗೂ ಕೋವಿಡ್ ವಾರಿಯರ್ಸ್‌ಗಳಿಗೆ ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆ ಕೈಗೊಳ್ಳಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜಿಲ್ಲಾ ಕ್ರೀಡಾಂಗಣ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net