

ಬಾಗಲಕೋಟೆ: ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮೇ 12 ವರೆಗೆ ಲಾಕ್‌ಡೌನ್ ಮಾದರಿಯ ಕರ್ಫ್ಯೂ ವಿಧಿಸಿದೆ. ಸಾರ್ವಜನಿಕರು ಇದಕ್ಕೆ ಸ್ಪಂದಿಸಬೇಕು. ನಿಯಮಗಳಿಗೆ ಅಡ್ಡಿಪಡಿಸಿದಲ್ಲಿ ಕಠಿಣ ಕ್ರಮ ನಿಶ್ಚಿತ ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಎಚ್ಚರಿಕೆ ನೀಡಿದರು.
14 ದಿನಗಳ ಕರ್ಫ್ಯೂ ಸಮಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪಾಲನೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮಾರ್ಗಸೂಚಿ ಅನುಷ್ಠಾನಕ್ಕೆ ಧಕ್ಕೆ ತಂದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಕಾರ್ಮಿಕರು, ವ್ಯಾಪಾರಸ್ಥರು, ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವೈದ್ಯರು, ಸಿಬ್ಬಂದಿಗೆ ಮನೋಧೈರ್ಯ ತುಂಬಲಾಗಿದೆ. ಹೆಚ್ಚಿನ ಪ್ರಕರಣಗಳು ಕಂಡ ಬಂದಲ್ಲಿ ಕುಮಾರೇಶ್ವರ ಆಸ್ಪತ್ರೆಯಲ್ಲಿ 500 ಬೆಡ್‌ಗಳ ವ್ಯವಸ್ಥೆ ಮಾಡಿದ್ದು, ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ರೆರೆನ್ಸ್ ಮಾಡಿದ ಕೋವಿಡ್ ರೋಗಿಗಳಿಗೆ ಅಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೇ ಕೋವಿಡ್ ಸೋಂಕು ಹೊಸ ರೂಪಾಂತರ ಕಾಣಿಸಿಕೊಂಡಿದೆ. ಜ್ವರ ಕಾಣಿಸಿಕೊಂಡಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ ಬರುವವರೆಗೂ ಕಾಯದೆ ಕೋವಿಡ್ ಔಷಧ ಪಡೆದುಕೊಂಡಲ್ಲಿ ಬೇಗ ಗುಣಮುಖರಾಗಬಹುದು ಎಂದು ತಿಳಿಸಿದರು.
ಕೃತಕ ಅಭಾವ ಸೃಷ್ಟಿಸಿದಲ್ಲಿ ಕ್ರಮ
ರೆಮ್‌ಡಿಸಿವಿರ್, ಸ್ಟರಾಯಿಡ್ ಸರ್ಕಾರದ ಮಾರ್ಗಸೂಚಿಯಂತೆ ಬಳಕೆ ಮಾಡಬೇಕು. ಕೃತಕವಾಗಿ ಯಾವುದೇ ಔಷಧ ಅಭಾವ ಸೃಷ್ಟಿ ಮಾಡಿದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಗರ್ಭಿಣಿಯರು ಹೆರಿಗೆ ಮುಂಚಿತವಾಗಿ 15 ದಿನ ಮೊದಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಲಸಿಗರ ಮೇಲೆ ಹದ್ದಿನ ಕಣ್ಣು
ಲಾಕ್‌ಡೌನ್ ಪರಿಣಾಮ ಬೆಂಗಳೂರು, ಮಂಗಳೂರು ಸೇರಿ ಹೊರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗುವುದು. ಹೊರ ಜಿಲ್ಲೆಯಿಂದ ಬಂದವರು 10 ದಿನ ತಮ್ಮ ಮನೆಯಲ್ಲಿ ಕ್ವಾರಂಟೈನ್ ಆಗಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣಕ್ಕೆ ಪರೀಕ್ಷೆ ಮಾಡಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಸ್ಥಳೀಯವಾಗಿ ಹೊರ ಜಿಲ್ಲೆಯಿಂದ ಬಂದವರ ಬಗ್ಗೆ ಗಮನ ಹರಿಸಬೇಕು. ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಸಿ ತಿಳಿಸಿದರು.
ಜಿಪಂ ಸಿಇಒ ಟಿ. ಭೂಬಾಲನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಸಾವಿರಾರರು ಸಂಖ್ಯೆಯಲ್ಲಿ ವಲಸಿಗರು ಆಗಮಿಸುವ ಸಾಧ್ಯತೆ ಇದೆ. ಅವರಿಗೆ ಸ್ಥಳೀಯವಾಗಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲಾಗುವುದು. 10 ದಿನ ಹೋಮ್ ಕ್ವಾರಂಟೈನ್ ಬಳಿಕ ಕೆಲಸ ನೀಡಲಾಗುತ್ತದೆ. ಅಲ್ಲಿಯೂ ಸಹ ಕಾರ್ಮಿಕರಿಗೆ ಮಾಸ್ಕ್ ಬಳಕೆ, ಪರಸ್ಪರ ಅಂತರ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಏನೇನು ಆರಂಭ? ಯಾವುದು ಬಂದ್?
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಸರ್ಕಾರದ 14 ದಿನಗಳ ಕರ್ಫ್ಯೂ ಅವಧಿಯಲ್ಲಿ ಅಗತ್ಯವಾದ ಆಹಾರ ಧಾನ್ಯ, ಹಣ್ಣು, ಹಾಲು, ಮಾಂಸ ಹಾಗೂ ಮೀನು ಮಳಿಗೆಗಳಿಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶವಿರುತ್ತದೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಪಾರ್ಸೆಲ್‌ಗೆ ಲಭ್ಯವಿದೆ. ಹೋಮ್ ಡಿಲೆವರಿ ವಾಹನಕ್ಕೆ ಪಾಸ್ ನೀಡಲಾಗುವುದು. ಕಟ್ಟಡ ಕೆಲಸಗಳಿಗೆ ಅನುಮತಿ ಇದ್ದು, ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿ ಮರಳಿ ಸ್ವಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ಗುತ್ತಿಗೆದಾರರು ಮಾಡಬೇಕು. ಅದಕ್ಕಾಗಿ ಗುತ್ತಿಗೆದಾರರ ವಾಹನಕ್ಕೆ ಪಾಸ್ ನೀಡಲಾಗುವುದು. ಶನಿವಾರ, ಭಾನುವಾರ ಕಾರ್ಮಿಕರ ಕೆಲಸಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಔಷಧ ಮಳಿಗೆ, ಲ್ಯಾಬ್, ರಕ್ತನಿಧಿ, ಆಸ್ಪತ್ರೆಗಳು ತೆರೆದಿರುತ್ತವೆ. ಖಾಸಗಿ, ಸರ್ಕಾರಿ ಬಸ್ ಸಂಚಾರ ಇರುವುದಿಲ್ಲ. ಟ್ಯಾಕ್ಸಿ, ಕ್ಯಾಬ್, ಆಟೋ, ಬಸ್ ಸೇವೆ ಇರುವುದಿಲ್ಲ. ಸಿನಿಮಾ, ಶಾಫಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೋಳ, ಕ್ಲಬ್, ರಂಗಮಂದಿರ ಸಂಪೂರ್ಣ ಬಂದ್ ಆಗಿರುತ್ತವೆ. ಸಾಮಾಜಿಕ, ರಾಜಕೀಯ, ಮನರಂಜನಾ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಕ್ಕೆ ಅವಕಾಶವಿರುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ. ಬ್ಯಾಂಕ್ ಸರ್ಕಾರಿ ಕಚೇರಿ, ಎಟಿಎಂ ತೆರೆದಿರುತ್ತವೆ. ಗಾರ್ಮೆಂಟ್ ಹೊರತುಪಡಿಸಿ ಕೈಗಾರಿಕೆ ಉತ್ಪಾದನಾ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಇವುಗಳು ಜತೆಗಿರಲಿ
ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳ ಸಹಾಯಕರಿಗೆ ಆಸ್ಪತ್ರೆಗಳೇ ಪಾಸ್ ನೀಡಬೇಕು
ಹೋಟೆಲ್, ರಸ್ಟೋರೆಂಟ್ ಮಾಲೀಕರು ಹೋಮ್ ಡಿಲೆವರಿ ಬಾಯ್‌ಗಳಿಗೆ ಪರವಾನಗಿ ಪಡೆದುಕೊಳ್ಳಬೇಕು
ರೈಲು, ವಿಮಾನದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಪ್ರದರ್ಶಿಸಿದರೆ ವಿನಾಯಿತಿ ನೀಡಲಾಗುತ್ತದೆ
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು ಎಂದಾದಲ್ಲಿ ಹಾಲ್ ಟಿಕೆಟ್ ಇಟ್ಟುಕೊಳ್ಳಬೇಕು
ಮದುವೆ ಕಾರ್ಯಕ್ರಮಗಳಿಗೆ 50 ಹಾಗೂ ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆ ಕಾರ್ಯಕ್ರಮಗಳಲ್ಲಿ 50 ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ. ಅಲ್ಲದೆ, ಮದುವೆ ದಿನ ಬೆಳಗ್ಗೆ 10 ಗಂಟೆ ವರೆಗೆ ಮಾತ್ರ ಓಡಾಟಕ್ಕೆ ಅವಕಾಶವಿರುತ್ತದೆ. ಉಳಿದ ಸಮಯದಲ್ಲಿ ಅವಕಾಶ ಇರುವುದಿಲ್ಲ. ಈವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ 8 ಪ್ರಕರಣ ದಾಖಲಿಸಲಾಗಿದೆ. 500 ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಲಾಗಿದೆ.
- ಲೋಕೇಶ ಜಗಲಾಸರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ