

ಬಾಗಲಕೋಟೆ: ಕರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ, ಸುಳ್ಳು ಸುದ್ದಿ, ವ್ಯಕ್ತಿಗತ ಅವಮಾನ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಕರೊನಾ ಭೀತಿ ಹಿನ್ನೆಲೆ ಜನರಿಗೆ ಭಯ, ಆತಂಕ ಹುಟ್ಟಿಸುವಂತಹ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದು. ನಿಖರವಾದ, ಅಧಿಕೃತ ಮಾಹಿತಿಯನ್ನು ಮಾತ್ರ ಹರಿಬಿಡಬೇಕು. ಕರೊನಾ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಾನಸಿಕ ಧೈರ್ಯ ತುಂಬುವಂತಹ ಕಾರ್ಯವಾಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾದ್ಯಂತ ವಾರದ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಬಾರದು. ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿಯಿಂದ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು. ಕಲಬುರಗಿಯಲ್ಲಿ ಕರೊನಾ ಪರೀಕ್ಷೆಯ ಪ್ರಯೋಗಾಲಯ ಸ್ಥಾಪಿಸಿದಂತೆ ಹುಬ್ಬಳ್ಳಿಯಲ್ಲಿಯೂ ಸಹ ಶೀಘ್ರದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಕರೊನಾ ಸೋಂಕು ಹರಡದಂತೆ ಜಿಲ್ಲಾಡಳಿದಿಂದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಪತ್ರ ವಿತರಣೆ, ಫಲಕಗಳ ಪ್ರದರ್ಶನ, ಪ್ರತಿನಿತ್ಯ ಬೆಳಗ್ಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ 10, ಆಯಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5, ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 12 ಐಸೋಲೇಷನ್ ವಾರ್ಡ್‌ಗಳನ್ನು ತೆರೆಯಲಾಗಿದೆ. 16 ಅಗತ್ಯವಿರುವ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಸೀದಿ ಹಾಗೂ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸುವ ಮೂಲಕ ಸಮುದಾಯ ಬಾಂಧವರು ಮನೆಯಲ್ಲಿಯೇ ಪ್ರಾರ್ಥನೆಯನ್ನು ಕೈಗೊಳ್ಳಲು ನಿರ್ದೇಶಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ, ಜಿಲ್ಲಾ ಶಸಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಸೇರಿ ಇತರರು ಇದ್ದರು.
ಜನತಾ ಕರ್ಫ್ಯೂ ಬೆಂಬಲಿಸಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾ.22 ರಂದು ಸಾರ್ವಜನಿಕರಿಗೆ ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಎಲ್ಲರೂ ಬೆಂಬಲಿಸಬೇಕು. ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮನೆಯಲ್ಲಿಯೇ ಇರಬೇಕು. ಸಂಜೆ 5 ಗಂಟೆಗೆ ಕರೊನಾ ವೈರಸ್ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ವಿವಿಧ ಸಮಿತಿಗಳ ರಚನೆ
ಕರೊನಾ ಸೋಂಕು ತಗುಲುದಂತೆ ಎಚ್ಚರಿಕೆ ವಹಿಸಲು ಜಿಲ್ಲೆಯ ಅಧಿಕಾರಿಗಳನ್ನೊಳಗೊಂಡ ಕಣ್ಗಾವಲು ಮತ್ತು ಸಂಪರ್ಕಜಾಲ ಪತ್ತೆ ಹಚ್ಚುವ ಸಮಿತಿ, ಮಾಧ್ಯಮ ಸಂಪರ್ಕ ಸಮಿತಿ, ಶುಚಿತ್ವ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಸಮಿತಿ, ಪ್ರತ್ಯೇಕ ಮತ್ತು ಸಂಪರ್ಕ ತಡೆ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳ ಮೇಲ್ವಿಚಾರಣಾ ಸಮಿತಿ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ, ಆಯುಷ್ ಪದ್ಧತಿಯಿಂದ ವೈರಾಣು ತಡೆಗಟ್ಟುವ ವಿಧಾನಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಜಿಲ್ಲೆಗಳಲ್ಲಿ 6 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಲ್ಲಿವರೆಗೆ ಚೆಕ್‌ಪೋಸ್ಟ್‌ಗಳಲ್ಲಿ 30670 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಕರೊನಾ ಲಕ್ಷಣಗಳು ಕಂಡುಬಂದಿರುವುದಿಲ್ಲ. ಶ್ರೀಶೈಲದಿಂದ ಆಗಮಿಸುತ್ತಿರುವ ಭಕ್ತರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದ್ದು, ನಂದವಾಡಗಿ ಚೆಕ್‌ಪೋಸ್ಟ್‌ದಲ್ಲಿ ಶುಕ್ರವಾರ 793 ಜನರ ತಪಾಸಣೆ ಮಾಡಲಾಗಿದೆ.
- ಗೋವಿಂದ ಕಾರಜೋಳ ಡಿಸಿಎಂ
EndFragment