

ಬಾಗಲಕೋಟೆ: ಕರೊನಾ ಹೊಡೆತಕ್ಕೆ ದೇಶ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕ, ಸಾಮಾಜಿಕ ಚಟುವಟಿಕೆ ಪುನಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಪ್ಯಾಕೇಜ್‌ನಿಂದ ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಕರೊನಾ ಸೋಂಕು ನಿಯಂತ್ರಣ ಜತೆಗೆ ‘ಸ್ವದೇಶಿ ಸಂಕಲ್ಪ ಸ್ವಾವಲಂಬಿ ಭಾರತ’ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಯೋಜನೆ ಹಾಕಿಕೊಂಡಿದೆ. ದೇಶದ ಆರ್ಥಿಕತೆಗೆ ಚೈತನ್ಯ ತುಂಬಿ ಸಶಕ್ತ, ಸದೃಢ, ‘ಆತ್ಮನಿರ್ಭರತಾ’ ಭಾರತ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ. ದೇಶವಾಸಿಗಳಿಗೆ ಹೊರೆಯಾಗದಂತೆ ಕರ್ಮ ಸಿದ್ಧಾಂತ ಆಧರಿಸಿ ಸ್ವಾವಲಂಬನೆ ರಾಷ್ಟ್ರ ನಿರ್ಮಾಣ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದೃಢ ಆರ್ಥಿಕತೆ, ಮೂಲಕ ಸೌಕರ್ಯ ಹೆಚ್ಚಿಸುವುದು, ತಂತ್ರಜ್ಞಾನ ಆಧರಿತ ವ್ಯವಸ್ಥೆ ಜಾರಿಗೊಳಿಸುವುದು, ರಾಷ್ಟ್ರದ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ, ನಮ್ಮ ದೇಶದ ಅಗತ್ಯ ಬೇಡಿಕೆಗಳ ನಾವೇ ಪೂರೈಸಿಕೊಳ್ಳುವುದು ಹೀಗೆ ಐದು ಅಂಶಗಳನ್ನು ಆಧರಿಸಿ ಪ್ಯಾಕೇಜ್ ರೂಪಿಸಿದ್ದಾರೆ. ಲೋಕಲ್ ಸೇ ಗ್ಲೋಬಲ್ ಘೋಷ ವಾಕ್ಯದೊಂದಿಗೆ ಜಾಗತೀಕರಣದ ಬದಲಿಗೆ ಸ್ಥಳೀಯ ಗುಡಿ ಕೈಗಾರಿಕೆ ಬಲಪಡಿಸಲಾಗುತ್ತದೆ. ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವ ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರ ಕೊಡುಗೆ ಅಪಾರ
ಲಾಕ್‌ಡೌನ್ ಪರಿಣಾಮ ಎಲ್ಲ ವರ್ಗದ ಜನ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೂ ಬೆಳೆದ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್‌ಗೆ 25000 ರೂ. ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಮಡಿವಾಳ, ಕ್ಷೌರಿಕ ವೃತ್ತಿ ಬಾಂಧವರು, ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಯ ವಿದ್ಯುತ್ ಬಿಲ್ ಫಿಕ್ಸಡ್ ಚಾರ್ಜ್‌ನ್ನು ಎರಡು ತಿಂಗಳ ಅವಧಿಗೆ ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಲಾಗುತ್ತದೆ. ಅಲ್ಲದೆ, ಸಾಮಾನ್ಯ ವಿದ್ಯುತ್ ಗ್ರಾಹಕರಿಗೆ ರಿಯಾಯಿತಿ ಘೋಷಣೆ ಮಾಡಿದ್ದಾರೆ. 109 ಕೋಟಿ ರೂ. ಮೊತ್ತದ ನೇಕಾರರ ಸಾಲ ಮನ್ನಾ ಘೋಷಿಸಲಾಗಿದೆ. ನೇಕಾರರ ಸಮ್ಮಾನ ಯೋಜನೆ ಮೂಲಕ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ಪ್ರೋತ್ಸಾಹ ಧನ ರಾಜ್ಯ ಸರ್ಕಾರ ನೀಡಲಿದೆ ಎಂದರು.
ಅಲ್ಲದೆ, ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ 3 ಸಾವಿರ ರೂ., ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ, ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ರೂ. ನೆರವು ನೀಡಲಾಗುತ್ತದೆ. ಆಶಾ ಕಾರ್ಯಕರ್ತರಿಗೆ 3 ಸಾವಿರ ಪ್ರೋತ್ಸಾಹ ಧನ, ಆಕಸ್ಮಿಕ ಮರಣ ಹೊಂದಿದ ಕುರಿ, ಮೇಕೆಗಳಿಗೆ ತಲಾ 5 ಸಾವಿರ ರೂ. ಪರಿಹಾರ ಸರ್ಕಾರ ನೀಡಲಿದೆ. ಒಟ್ಟಾರೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ವಿವಿಧ ವರ್ಗಕ್ಕೆ 2284 ಕೋಟಿ ರೂ.ಮೊತ್ತದ ಪ್ಯಾಕೇಜ್ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಸಾಕಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.
EndFragment