ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಿ

BKT NEWS 10-1
Published on

ಬಾಗಲಕೋಟೆ: ಕರೊನಾ ನಿಯಂತ್ರಣಕ್ಕಾಗಿ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳ ಮಾಲೀಕರು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು. ಹೋಟೆಲ್‌ಗೆ ಬರುವ ಜನರ ಮೇಲೆ ಹೆಚ್ಚಿನ ನಿಗಾವಹಿಸುವಂತೆ ನಗರಸಭೆಯ ಆಯುಕ್ತ ವಿ.ಮುನಿಶಾಮಪ್ಪ ಮಾಲೀಕರಿಗೆ ಸೂಚಿಸಿದರು.

ನಗರಸಭೆ ಸಭಾಭವನದಲ್ಲಿ ಬುಧವಾರ ಜರುಗಿದ ಹೋಟೆಲ್, ಸಲೂನ್ ಮಾಲೀಕರ ಮತ್ತು ಮಸೀದಿಗಳ ಅಧ್ಯಕ್ಷರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಹೋಟೆಲ್, ರೆಸ್ಟೋರೆಂಟ್, ಸಲೂನ್, ಪಾರ್ಲರ್, ಧಾರ್ಮಿಕ ಸ್ಥಳಗಳಲ್ಲಿ ಕಾರ್ಯಚಟುವಟಿಕೆಗೆ ಅನುಮತಿ ನೀಡಿದೆ. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು. ಕರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹೋಟೆಲ್‌ಗೆ ಬರುವವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು ಎಂದು ತಿಳಿಸಿದರು.

ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸ್ಥಳೀಯ, ಹೊರ ರಾಜ್ಯ, ಹೊರ ದೇಶದಿಂದ ಬರುವುದರಿಂದ ಅವರ ಮೇಲೆ ನಿಗಾ ವಹಿಸಬೇಕು. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಹೋಟೆಲ್‌ನಲ್ಲಿ ಕೈತೊಳೆಯಲು ಸ್ಯಾನಿಟೈಸರ್, ಸೋಪನ್ನು ವಾಶಬೇಸ್‌ನಲ್ಲಿ ಇಡಬೇಕು. ಸ್ನಾನಗೃಹ, ಶೌಚಗೃಹ ಸ್ವಚ್ಛತೆ ಕಾಪಾಡಿಕೊಳ್ಳತಕ್ಕದ್ದು. ಊಟ, ಉಪಾಹಾರ, ಟೀ, ನೀರು ಸೇವನೆ ನಂತರ ಪ್ಲೇಟ್, ಗ್ಲಾಸ್, ಲೋಟಾ ಮತ್ತು ಕಪ್‌ಗಳನ್ನು ತಕ್ಷಣವೇ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಕುಡಿಯಲು ಬಿಸಿ ನೀರನ್ನು ಹಾಗೂ ಚೆನ್ನಾಗಿ ಬೇಯಿಸಿದ ಆಹಾರವನ್ನು ಪೊರೈಸಬೇಕು. ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರು ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಬೆಳಗ್ಗೆ ಕಷಾಯ ಕುಡಿಯಬೇಕು ಎಂದು ಸಲಹೆ ನೀಡಿದರು. ನಗರಸಭೆಯಿಂದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ವಾರಕ್ಕೊಮ್ಮೆ ಸೋಡಿಯಂ ಹೈಪೋಕ್ಲೋರೈಟ್ ಸೊಲೂಷನ್‌ದಿಂದ ಸಾನಿಟೈಸರ್ ಮಾಡಿಕೊಡಲಾಗುವುದು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ನಗರಸಭೆ ಪರಿಸರ ಅಭಿಯಂತರ ಹನಮಂತಪ್ಪ ಕಲಾದಗಿ, ಕಿರಿಯ, ಹಿರಿಯ ಆರೋಗ್ಯ ನಿರೀಕ್ಷಕರಾದ ಸತೀಶ ಚೌಡಿ, ಸುನೀಲ್‌ಕುಮಾರ, ಶಶಿಕುಮಾರ್, ಮೌನೇಶ ಸೇರಿ ನಗರದ ಹೋಟೆಲ್, ರೆಸ್ಟೋರೆಂಟ್, ಸಲೂನ್ ಅಂಗಡಿಗಳ ಮಾಲೀಕರು ಹಾಗೂ ಎಲ್ಲ ಮಸೀದಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಲೂನ್, ಪಾರ್ಲರ್‌ಗಳಿಗೆ ನಿಯಮ ಪಾಲನೆ ಕಡ್ಡಾಯ
ಸಲೂನ್ ಮತ್ತು ಪಾರ್ಲರ್‌ಗಳಿಗೆ ಸರ್ಕಾರದ ಎಸ್‌ಓಪಿಯಲ್ಲಿ ನೀಡಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ ಧರಿಸಿಕೊಂಡು ಬರಲು ತಿಳಿಸಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ, ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಗ್ರಾಹಕರಿಗೆ ಬಳಕೆ ಮಾಡಿದ ಸಾಧನಗಳನ್ನು ಲೈಸೋಲ್ ಬಳಸಿ ಸೋಂಕು ನಿವಾರಣೆ ಮಾಡಬೇಕು. ಆಸನಗಳ ನಡುವೆ ಕನಿಷ್ಠ 1 ಮೀಟರ್ ಅಂತರ್ ಇರುವಂತೆ ನಿರ್ವಹಣೆ ಮಾಡಬೇಕು. ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಬೇಕು. ನಿಯಮ ಪಾಲನೆಯಾಗದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
ಮಸೀದಿಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಸೀದಿಗೆ ಬರುವ ಮಕ್ಕಳು ಮತ್ತು ವೃದ್ಧರನ್ನು ಥರ್ಮಲ್ ಟೆಸ್ಟ್ ಮಾಡಬೇಕು. ಬೇರೆ ಬೇರೆ ದೇಶ, ರಾಜ್ಯಗಳಿಂದ ಬಂದವರಿದ್ದರೆ ಸ್ವಯಂ ಪ್ರೇರಿತರಾಗಿ ನಗರಸಭೆ ತಿಳಿಸಬೇಕು. ಇಲ್ಲವೇ ಬಸ್ ನಿಲ್ದಾಣದಲ್ಲಿರುವ ಕೋವಿಡ್-19 ಕ್ಲಿನಿಕ್ ಬಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಮಸೀದಿಗಳಲ್ಲಿ ಮೇಲಿಂದ ಮೇಲೆ ಸ್ಯಾನಿಟೈಸರ್ ಮಾಡಬೇಕು. ಆದಷ್ಟು ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಮನವರಿಕೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿ ಪ್ರಾರ್ಥನೆಗೆ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಆಯುಕ್ತ ವಿ.ಮುನಿಶಾಮಪ್ಪ ಸೂಚನೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net