

ಬಾಗಲಕೋಟೆ: ಜಿಲ್ಲೆಯಲ್ಲಿ ಕರೊನಾ ಸೋಂಕು ಹಾಗೂ ಸಾವು ತೀವ್ರಗೊಂಡಿದ್ದು, ಕೋವಿಡ್ ನಿರ್ವಹಣೆ ಮಾಡುವಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಆರೋಪಿಸಿದರು.
ಜಿಲ್ಲೆಯಲ್ಲಿ ಹೆಚ್ಚಿರುವ ಸೋಂಕು ಹಾಗೂ ಸಾವಿನ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಫೋನ್ ಮೂಲಕ ನೀಡುತ್ತಿರುವ ಮಾಹಿತಿ ಹಾಗೂ ಬೆಡ್, ಆಕ್ಸಿಜನ್, ರೆಮ್‌ಡೆಸಿವಿರ್ ಬೇಡಿಕೆ ಕಂಡು ಮಂಗಳವಾರ ಸ್ವತಃ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪರಿಸ್ಥಿತಿ ಭಯಾನಕವಾಗಿದೆ. ಜಿಲ್ಲೆಯ ಪರಿಸ್ಥಿತಿಯೂ ಅಪಾಯ ಸ್ಥಿತಿಯಲ್ಲಿ ಇದೆ. ಇದೇ ರೀತಿ ಮುಂದುವರಿದಲ್ಲಿ ಜಿಲ್ಲೆಯೂ ಮತ್ತೊಂದು ಚಾಮರಾಜನಗರ ಪ್ರಕರಣದಂತೆ ಆಗಬಹುದು. ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರೆಮ್‌ಡೆಸಿವಿರ್ ಬೇಡಿಕೆ ಸಾವಿರ, ಪೂರೈಕೆ 150
ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ರೆಮ್‌ಡೆಸಿವಿರ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಉಳಿದ ಕೋವಿಡ್ ಸೇವೆ ನೀಡುತ್ತಿರುವ ಜಿಲ್ಲೆಯ 33 ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿರ್ ಕೊರತೆ ಇದೆ. ಹೀಗಾಗಿ ಡ್ರಗ್ಸ್ ಅಧಿಕಾರಿಗಳಿಂದ ನಾನೇ ಮಾಹಿತಿ ಪಡೆದು, ಬಳಿಕ ರಾಜ್ಯದ ಅಧಿಕಾರಿ ಜತೆಗೆ ಚರ್ಚಿಸಿ, ಜಿಲ್ಲೆಯ ಬೇಡಿಕೆ ತಕ್ಕಂತೆ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದೇನೆ. ಜಿಲ್ಲೆಯಲ್ಲಿ ಸದ್ಯ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ ಒಂದು ಸಾವಿರ ರೆಮ್‌ಡೆಸಿವಿರ್ ವಯಲ್ ಬೇಡಿಕೆ ಇದ್ದರೆ ಪೂರೈಕೆ ಮಾತ್ರ 150 ಇದೆ. ಇದರಲ್ಲೂ ಮತ್ತೆ ಕಾಳಸಂತೆ ದಂಧೆ ಬೇರೆ. ಪರಿಸ್ಥಿತಿ ಹೀಗಾದರೆ ಜನರು ಬದುಕುವುದು ಹೇಗೆ? ಕಾಳಸಂತೆಗೆ ಸಂಬಂಧಿಸಿದಂತೆ ಪೊಲೀಸರು ಒಂದು ಕೇಸ್ ಪತ್ತೆ ಮಾಡಿದ್ದಾರೆ. ಇದು ಇನ್ನಷ್ಟು ಬಿಗಿಯಾಗಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು ಸಹ ನಮ್ಮವರೆ. ಅವರು ಬದುಕಬೇಕಲ್ಲ. ಇದೆಲ್ಲದರ ಕಡೆಗೆ ಜಿಲ್ಲಾಡಳಿತ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕು ಎಂದರು.
ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದಾರೆ
ಇನ್ನು ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯೂ ಬಹಳಷ್ಟಿದೆ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 13 ಮೆಟ್ರಿಕ್ ಟನ್ ಆಕ್ಸಿಜನ್ ಬೇಡಿಕೆ ಇದೆ. ಇನ್ನು ನಾಲ್ಕೈದು ದಿನಗಳು ಕಳೆದರೆ ಇದು 16 ಟನ್‌ಗೆ ಹೆಚ್ಚಲಿದೆ. ಆದರೆ, ಸದ್ಯ ನಮಗೆ ಪೂರೈಕೆ ಆಗುತ್ತಿರುವುದು 8 ಮೆ.ಟನ್ ಮಾತ್ರ. ಶೇ.50 ರಷ್ಟು ಕೊರತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಪರ್ಯಾಯ ವ್ಯವಸ್ಥೆ ಕಡೆಗೆ ಗಮನ ಹರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಸಾವಿನ ಲೆಕ್ಕ, ಇಲ್ಲ ಪಕ್ಕಾ
ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಆಗಿದೆ, ಆಕ್ಸಿಜನ್ ಸರಿಯಾಗಿ ಸಿಗುತ್ತಿಲ್ಲ, ರೆಮ್‌ಡೆಸಿವಿರ್ ಇಂಜೆಕ್ಷನ್ ಕೊರತೆ ಇದೆ. ಇದೆಲ್ಲದರ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆದರೆ, ಜಿಲ್ಲಾಡಳಿತ ನೀಡುತ್ತಿರುವ ಸಾವಿನ ಲೆಕ್ಕ ತಪ್ಪಿದೆ. ನಿತ್ಯ ಪ್ರತಿ ಆಸ್ಪತ್ರೆಯಿಂದ ಇಬ್ಬರು, ಮೂವರು ಸಾವನ್ನಪ್ಪುತ್ತಿದ್ದಾರೆ. ಅನೇಕರು ಬಿಲ್ ಕಟ್ಟಾಲಾಗದೆ ಹೆಣ ತೆಗೆದುಕೊಂಡು ಹೋಗುತ್ತಿಲ್ಲ. ಚಿಕಿತ್ಸೆ ಸಿಗದೆ ರಸ್ತೆಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದ ಅವರು, ಸದ್ಯ ಜಿಲ್ಲಾಡಳಿತ ನೀಡುತ್ತಿರುವ ಸಾವಿನ ಲೆಕ್ಕದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.