

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ನ್ಯಾಯಮೂರ್ತ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಧ್ಯ. ಬಿಜೆಪಿ ಸರ್ಕಾರದಿಂದ ಅದನ್ನು ನಿರೀಕ್ಷೆ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ಮುಖಂಡ ಫೀರಪ್ಪ ಮ್ಯಾಗೇರಿ ಅಭಿಪ್ರಾಯ ಪಟ್ಟಿದ್ದಾರೆ.
ಬೀಳಗಿ ವಿಧಾನಸಭಾ ಕ್ಷೇತ್ರದ ಸೋರಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಎಂ.ಕೃಷ್ಣಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಆಯೋಗ ರಚನೆ ಮಾಡಿದರು. ಆಯೋಗವು ಒಳಮೀಸಲಾತಿ ಬಗ್ಗೆ ನ್ಯಾಯಯುತ ವರದಿ ಸಲ್ಲಿಸಿದೆ. ಇದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕಿತ್ತು. ಆದರೆ, ಬಿಜೆಪಿ ಸರ್ಕಾರದಿಂದ ಕೇಂದ್ರಕ್ಕೆ ವರದಿ ಶಿಫಾರಸು ಆಗುವುದು ಅನುಮಾನ ಎಂದರು.
ಬೀಳಗಿ ಕ್ಷೇತ್ರದ ಎಸ್ಸಿ ಕಾಲನಿಗಳಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ನಮ್ಮ ಕಾಲನಿಗಳು ನೆನಪಿಗೆ ಬರುತ್ತವೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳು ಹಾಳಾಗಿವೆ. ಆದರೂ ಇಲ್ಲಿಗೆ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ಆರೋಪಿಸಿದರು.
ಸಮಾವೇಶವನ್ನು ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಉದ್ಘಾಟಿಸಿದರು. ಮಾಜಿ ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಪಂ ಸದಸ್ಯೆ ಕಸ್ತೂರಿ ಲಿಂಗಣ್ಣವರ, ಬಸವಪ್ರಭು ಸರನಾಡಗೌಡ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ, ಜಿಪಂ ಮಾಜಿ ಸದಸ್ಯ ಸಿದ್ದಣ್ಣ ಛಬ್ಬಿ ಮತ್ತಿತರರು ಇದ್ದರು.