ಜಿಲ್ಲೆಯಲ್ಲಿ 70 ಬಾಲ್ಯವಿವಾಹ ತಡೆ

BKT 2-1
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್‌ದಿಂದ ನವೆಂಬರ್‌ವರೆಗೆ ಒಟ್ಟು 70 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದ್ದು, ಮೂರು ಎ್ಐಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ತನಿಖಾ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಹಾಯ ಮಂಡಳಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ನವೆಂಬರ್ ತಿಂಗಳಲ್ಲೇ 15 ಬಾಲ್ಯವಿವಾಹವನ್ನು ತಡೆಯಲಾಗಿದೆ. ಬಾಲ್ಯವಿವಾಹದಿಂದ ರಕ್ಷಿತವಾದ ಮಕ್ಕಳ ಮಾಹಿತಿಯನ್ನು ಜಿಲ್ಲಾ ಮಟ್ಟದ ಎನ್‌ಐಸಿ ತಂತ್ರಾಂಶದಲ್ಲಿ ಅಳವಡಿಸಲು ಕ್ರಮಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಸಿ.ಶಿವಲಿಂಗಪ್ಪ ಅವರಿಗೆ ಸೂಚಿಸಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ್ಯವಿವಾಹ ನಡೆದಲ್ಲಿ ಅದಕ್ಕೆ ಕಾರಣರಾದ ಪೂಜಾರಿ, ಸಾಮೂಹಿಕ ವಿವಾಹ ಆಯೋಜಕರ ಹಾಗೂ ಪೋಷಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಪ್ರಕಾರ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬಾಲ್ಯವಿವಾಹ ಪ್ರಕರಣದಲ್ಲಿ 19 ವರ್ಷ ಮೇಲ್ಪಟ್ಟ ಮಕ್ಕಳಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ದಾಖಲಿಸಲು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯಿಂದ 1139 ಎಚ್‌ಐವಿ ಬಾಧಿತ ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂ.ದಂತೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಬಾಲ ನ್ಯಾಯ ಮಂಡಳಿಯಿಂದ ಬಿಡುಗಡೆ ಹೊಂದಿದ ಪ್ರಾಯೋಜಕತ್ವದಡಿ 61 ಮಕ್ಕಳಿಗೆ ಒಂದು ಸಾವಿರ ರೂ.ದಂತೆ ಸಹಾಯಧನ ನೀಡಲಾಗುತ್ತಿದೆ. ದತ್ತು ಕಾರ್ಯಕ್ರಮದಡಿ 2 ಮಕ್ಕಳನ್ನು ದತ್ತು ನೀಡಲಾಗಿದೆ. ಪೋಷಕತ್ವದಡಿ 2 ಮಕ್ಕಳನ್ನು ನೀಡಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹೊಸದಾಗಿ 82 ಪ್ರಕರಣಗಳು ಬಂದಿದ್ದು, ಇದರಲ್ಲಿ ಬಾಲ್ಯವಿವಾಹ, ಏಕ ಪೋಷಕತ್ವ ಹಾಗೂ ಅನಾಥ ಮಕ್ಕಳು ಸೇರಿವೆ. ಜಿಲ್ಲಾ ತನಿಖಾ ಸಮಿತಿಯಡಿ ಜಿಲ್ಲೆಯಲ್ಲಿ 24 ಪಾಲನಾ ಸಮಿತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಸಿ.ಶಿವಲಿಂಗಪ್ಪ, ಎನ್‌ಐಸಿ ಅಧಿಕಾರಿ ಗಿರಿಯಾಚಾರ, ಮಕ್ಕಳ ರಕ್ಷಣಾಧಿಕಾರಿ ಕೇಶವ ದಾಸ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ತೇಜಶ್ವಿನಿ ಹಿರೇಮಠ, ಎಸ್.ಎಸ್.ಬೆಳಗಲಿ ಸೇರಿ ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಕಚೇರಿಯ ಅಧೀಕ್ಷಕಿ ಜಯಮಾಲಾ ದೊಡಮನಿ ಉಪಸ್ಥಿತರಿದ್ದರು.

ಸಿಬ್ಬಂದಿ ಪರಿಶೀಲನೆ ಕಡ್ಡಾಯ
ಜಿಲ್ಲೆಯಲ್ಲಿ ಮಕ್ಕಳ ಪಾಲನೆಯಲ್ಲಿ ತೊಡಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪರಿಶೀಲನೆ ಪೊಲೀಸ್‌ರಿಂದ ಕಡ್ಡಾಯವಾಗಿದ್ದು, ಪರಿಶೀಲನೆ ಮಾಡಿಸದಿದ್ದಲ್ಲಿ ಅಂತ ಸಂಸ್ಥೆ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಮಕ್ಕಳ ಸಹಾಯವಾಣಿ ಮೂಲಕ ದಾಖಲಾದ ಎಲ್ಲ ಪ್ರಕರಣಗಳನ್ನು ಸಂಬಂಧಿಸಿದ ಇಲಾಖೆಗೆ ಸವಿಸ್ತಾರವಾಗಿ ವರದಿ ಸಲ್ಲಿಸಬೇಕು. ಸದರಿ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಅನುಸರಣೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net