

ಬಾಗಲಕೋಟೆ: ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳು ಉತ್ತಮ ಸೇವೆ ಒದಗಿಸದಿದ್ದರೆ ಅವುಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ಸಂಸ್ಥೆಗಳಿಗೆ ಹಮ್ಮಿಕೊಂಡಿದ್ದ ಸಾಮಾಜಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಸಾಮಾಜಿಕ ಪರಿಶೀಲನಾ ತಂಡವು ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ ವರದಿಯನ್ವಯ ಕೆಲವೊಂದು ಮಕ್ಕಳ ಪಾಲನಾ ಸಂಸ್ಥೆಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನಗೃಹ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಕಂಡು ಬಂದಿದೆ. ಸಂಸ್ಥೆಗಳು ಎಲ್ಲ ಅಗತ್ಯ ಸೌಲಭ್ಯಗಳನ್ನು ಒಂದು ವಾರದಲ್ಲಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಇಳಕಲ್ಲಿನ ಮುರಗೇಂದ್ರ ಶಿವಾಚಾರ್ಯ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಕಟ್ಟಡ ದುರಸ್ಥಿಯಲ್ಲಿದ್ದು, ವಾಸಕ್ಕೆ ಯೋಗ್ಯವಾಗಿರುವದಿಲ್ಲವೆಂದು ತಿಳಿದು ಬಂದಿದೆ. ಸಂಸ್ಥೆಯಲ್ಲಿರುವ ಮಕ್ಕಳನ್ನು ಒಂದು ವಾರದಲ್ಲಿ ಬೇರೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಸಂಸ್ಥೆ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇಲ್ಲವೆ ಸಂಸ್ಥೆಗೆ ನೀಡುವ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ತಿಳಿಸಿದರು.
ಕಿವುಡ ಮತ್ತು ಬುದ್ದಿಮಾಂದ್ಯ ಮಕ್ಕಳಿಗಾಗಿ ರೂಪಿಸಲಾದ ವಿಮೆ ಸೌಲಭ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಸಹಯೋಗದಲ್ಲಿ ಒದಗಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನೆ ಸಂಸ್ಥೆಗಳ ಮಕ್ಕಳಿಗೆ ವೈದ್ಯಕೀಯ ಸೌಲಭ್ಯ, ಪ್ರಥಮ ಚಿಕಿತ್ಸೆಯನ್ನು ಕಡ್ಡಾಯವಾಗಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎ.ಜಿ.ತೋಟದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ಉಕ್ಕಲಿ, ಜಿಲ್ಲಾ ಆಸ್ಪತ್ರೆಯ ಮನೋತಜ್ಞ ಡಾ.ವಿ.ವೈ.ಪಾಟೀಲ, ಸಿಡಬ್ಲೂಸಿ ಸದಸ್ಯ ಎಸ್.ಎಸ್.ಬೆಳಗಲಿ ಸೇರಿದಂತೆ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಯುಡಿಐಡಿ ಬೇಕ ವಿತರಿಸಿ
ಜಿಲ್ಲೆಯಲ್ಲಿ ಅಂಗವಿಕಲರಿಗೆ ವಿತರಿಸಲಾಗುತ್ತಿರುವ ಯುಡಿಐಡಿ ಕಾರ್ಡಗಳ ಬಗ್ಗೆ ಚರ್ಚಿಸಿದ ಅವರು ಇನ್ನು ಒಂದು ತಿಂಗಳೊಳಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ನೀಡತಕ್ಕದ್ದು. ಇಂದಿನಿಂದಲೇ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ತಾಲೂಕುವಾರು ಪಟ್ಟಿ ಪಡೆದುಕೊಂಡು ಆಯಾ ತಾಲೂಕಾ ಕೇಂದ್ರಗಳಲ್ಲಿ ಕಾರ್ಡ ನೀಡುವ ವ್ಯವಸ್ಥೆಯಾಗಬೇಕು. ಈ ಕುರಿತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಡಿಎಚ್‌ಒ ಡಾ.ಅನಂತ ದೇಸಾಯಿ ಅವರಿಗೆ ಡಿಸಿ ರಾಜೇಂದ್ರ ಸೂಚಿಸಿದರು.
ಅಧಿಕಾರಿಗಳು ಪ್ರತಿಯೊಂದು ಸಭೆಗೆ ಬರುವಾಗ ಪೂರ್ವ ತಯಾರಿಯಲ್ಲಿ ಬರಬೇಕು. ಕೇಳಿದ ಪ್ರಶ್ನೆಗಳಿಗೆ ಕಡತ ತೆಗೆದು ಉತ್ತರ ನೀಡಬಾರದು. ಪ್ರಮುಖ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಉತ್ತರಿಸಬೇಕು. ಜೀವನದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ನೀಮಗೆ ನೀಡಿದ ಹುದ್ದೆಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು.
- ಕೆ.ರಾಜೇಂದ್ರ ಜಿಲ್ಲಾಧಿಕಾರಿ