

ಬಾಗಲಕೋಟೆ: ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಗುರುವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಪಾಲ್ಗೊಂಡು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹಾಗೂ ಪ್ರವಾಹ ಹಾನಿಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶೇ.84 ರಷ್ಟು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇಲ್ಲಿವರೆಗೆ ಒಟ್ಟು 75479 ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 65785 ನೆಗೆಟಿವ್, 7618 ಪಾಸಿಟಿವ್ ಹಾಗೂ 83 ಮೃತ ಪ್ರಕರಣಗಳು ವರದಿಯಾಗಿವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ವಾರ್ಡ್‌ವಾರು ಸರ್ವೇ ಕಾರ್ಯ ಪ್ರಗತಿಯಲ್ಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ 19 ವೆಂಟಿಲೇಟರ್, 145 ಆಕ್ಸಿಜನ್ ಬೆಡ್‌ಗಳಿವೆ. ಜಿಲ್ಲೆಯಲ್ಲಿ ಸದ್ಯ 1137 ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಹೋಮ್ ಕ್ವಾರಂಟೈನ್‌ನಲ್ಲಿ 268 ಜನ, ಸಿಸಿ ಕೇಂದ್ರಗಳಲ್ಲಿ 535 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 187 ಜನ ಇದ್ದಾರೆ. ಪ್ರತಿದಿನ ನಾಲ್ಕೂವರೆ ಟನ್ ಆಕ್ಸಿಜನ್ ಅವಶ್ಯಕತೆಯಿದ್ದು, ಕಳೆದ ವಾರ ಆಕ್ಸಿಜನ್ ಕೊರತೆ ಉಂಟಾಗಿತ್ತು. ಬಳ್ಳಾರಿಯಿಂದ ತರಿಸಿಕೊಂಡು ತೊಂದರೆ ನಿವಾರಿಸಲಾಗಿದೆ ಎಂದು ಹೇಳಿದರು. 16 ಗೊಬ್ಬರ ಅಂಗಡಿಗಳಿಗೆ ನೋಟಿಸ್
ಬಾಗಲಕೋಟೆಯಲ್ಲಿ ವಾಡಿಕೆಗಿಂತ ಈ ವರ್ಷ ಶೇ.29 ರಷ್ಟು ಹೆಚ್ಚಿಗೆ ಮಳೆಯಾಗಿದ್ದರಿಂದ ಶೇ.106 ರಷ್ಟು ಬಿತ್ತನೆಯಾಗಿದೆ. ರಸಗೊಬ್ಬರದ ಸಮಸ್ಯೆಯಾಗದಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲೆಗೆ ಹೆಚ್ಚುವರಿಯಾಗಿ ರಸಗೊಬ್ಬರವನ್ನು ತರಿಸಿದ್ದಾರೆ. ಜಿಲ್ಲೆಗೆ 43400 ಟನ್ ಯೂರಿಯಾ ಗೊಬ್ಬರ ಹಂಚಿಕೆಯಾಗಿದ್ದು, ಈ ಪೈಕಿ 44 ಸಾವಿರ ಪೂರೈಸಲಾಗಿದೆ. ಇನ್ನು ಒಂದು ಸಾವಿರ ಟನ್ ಲಭ್ಯವಿದೆ. ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಕ್ರಮ ವಹಿಸಲಾಗಿದ್ದು, 16 ಗೊಬ್ಬರ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಡಿಸಿ ರಾಜೇಂದ್ರ ಸಿಎಂಗೆ ತಿಳಿಸಿದರು.
ವಿಡಿಯೋ ಸಂವಾದದ ಸಂದರ್ಭದಲ್ಲಿ ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗುರಿಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಕೃಷಿ ಉಪನಿರ್ದೇಶಕ ಎಸ್.ವಿ. ಕೊಂಗವಾಡ ಸೇರಿ ಇತರರು ಉಪಸ್ಥಿತರಿದ್ದರು.
857.35 ಕೋಟಿ ರೂ. ಹಾನಿ
ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 22473 ಹೆಕ್ಟೇರ್ ಕೃಷಿ, 12388 ಹೆಕ್ಟೇರ್ ತೋಟಗಾರಿಕೆ, 8.40 ರೇಷ್ಮೆ ಸೇರಿ ಒಟ್ಟು 34869 ಹೆಕ್ಟೇರ್ ಪ್ರದೇಶದ ಅಂದಾಜು 374.87 ಕೋಟಿ ರೂ. ಹಾನಿಯಾಗಿದೆ. ಪ್ರವಾಹದಿಂದ ಒಂದು ಜಾನುವಾರ ಮೃತಪಟ್ಟಿದೆ. ಪ್ರವಾಹ, ಮಳೆಯಿಂದ 105 ಪೂರ್ಣ ಪ್ರಮಾಣ, 26 ತೀವ್ರ, 338 ಭಾಗಶಃ ಸೇರಿ ಒಟ್ಟು 469 ಮನೆಗಳು ಹಾನಿಯಾಗಿವೆ. 999.63 ಕಿ.ಮೀ. ಗ್ರಾಮೀಣ ರಸ್ತೆ, 19 ಕುಡಿಯುವ ನೀರಿನ ಕಾಮಗಾರಿಗಳು, 32 ಸೇತುವೆ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ. ರಾಜ್ಯ ಹೆದ್ದಾರಿ, 308 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 54 ಸೇತುವೆ, 1851 ವಿದ್ಯುತ್ ಕಂಬಗಳು, 471 ಟಾನ್‌ಸ್ಾರ್ಮರ್, 69.6 ಕಿ.ಮೀ. ವಿದ್ಯುತ್ ತಂತಿ ಹಾನಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಅಂದಾಜು 857.35 ಕೋಟಿ ರೂ. ಹಾನಿ ಆಗಿರುವುದಾಗಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ಎ ಮತ್ತು ಬಿ ಸೇರಿ ಒಟ್ಟು 3396 ಮನೆಗಳ ಪೈಕಿ 334 ಪೂರ್ಣಗೊಂಡಿವೆ. 1393 ರೂಪ್ ಹಂತದಲ್ಲಿದ್ದರೆ, ಇನ್ನು 193 ಮನೆಗಳು ಪ್ರಾರಂಭವಾಗಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರ ನೀಡಿದರು.
EndFragment