ಜ್ಞಾನದಿಂದ ಸಮೃದ್ಧಿ

BKT 12-3
Published on

ಬಾಗಲಕೋಟೆ: ಕನ್ನಡಾಂಬೆ ಹಾಗೂ ಭಾರತಾಂಬೆ ಇವರಿಬ್ಬರೂ ನಮಗೆ ಮಾತೆಯರೇ, ಮಾತೃಭಾಷೆ ಶ್ರೇಷ್ಠ, ರಾಷ್ಟ್ರಭಾಷೆ ಕನಿಷ್ಠ ಎನ್ನಲು ಆಗದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಎಸ್.ಜಿ. ಕೋಟಿ ಹೇಳಿದರು.

ತಾಲೂಕಿನ ಕಿರಸೂರ ಗ್ರಾಮದ ಗೌರಿಶಂಕರ ಬಿಲ್ವಾಶ್ರಮದಲ್ಲಿ ಸೋಮವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಾಗಲಕೋಟೆ ತಾಲೂಕು ಘಟಕದಿಂದ ಬಾಗಲಕೋಟ ತಾಲ್ಲೂಕು ಘಟಕ ಹಮ್ಮಿಕೊಂಡ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆಗಳು ಜ್ಞಾನದ ಹೆಬ್ಬಾಗಿಲುಗಳು ಜ್ಞಾನ ಯಾವುದೇ ಮೂಲದಿಂದ ಹರಿದು ಬಂದರೂ ಸ್ವೀಕರಿಸಿ ಸಮೃದ್ಧತೆಯನ್ನು ಹೊಂದಬೇಕು. ಭಾಷೆ, ಸಾಹಿತ್ಯ ಚಟುವಟಿಕೆಗಳು ಸೂಪ್ತವಾದ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಹೊರಹಾಕುವ ಸಾಧನಗಳಾಗಿವೆ ಎಂದರು.

ನಿವೃತ್ತ ಶಿಕ್ಷಕ ಎಂ.ಬಿ. ಹೂಗಾರ ಮಾತನಾಡಿ, ಮಾತೆಂಬುದು ಜ್ಯೋತಿರ್ಲಿಂಗ ಎಂಬುದನ್ನು ರುಜುವಾತು ಮಾಡಿ ತೋರಿಸಿದವರು ಸ್ವಾಮಿ ವಿವೇಕಾನಂದರು. ಮಾತು ಮುತ್ತಾಗಲು, ಮಾತು ಮಾಣಿಕ್ಯವಾಗಲು, ನಮ್ಮನ್ನು ನಾವೂ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವದು ಅತಿ ಅವಶ್ಯಕ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಾಗಲಕೋಟೆ ತಾಲೂಕ ಘಟಕದ ಅಧ್ಯಕ್ಷೆ ಗೀತಾ ದಾನಶೆಟ್ಟಿ ಮಾತನಾಡಿ, ವಯಸ್ಸು, ಜಾತಿ, ಮತ, ಪಂಥ ಭೇದ ಇಟ್ಟುಕೊಳ್ಳಬಾರದು. ಸಮಾನರಾಗಿ ಒಂದೇ ಗೂಡಿನ ಹಕ್ಕಿಗಳಂತೆ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕರಬಾಶೆಟ್ಟಿ, ಬಿವಿವಿ ಸಂಘದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ಬಿ. ದಾನಶೆಟ್ಟಿ, ಮುಖಂಡರು ರೇವಣ್ಣ ಬೆಣ್ಣೂರ, ಅಜಯಕುಮಾರ್ ಪುರಾಣಿಕ, ಶಿವಪ್ರಸಾದ್ ಹೂಗಾರ, ಶ್ರೀಶೈಲ ಮಠಪತಿ, ಮಂಜುಳಾ ಅಂಗಡಿ, ಮಹಾದೇವಿ ಹೂಗಾರ, ನಿರ್ಮಲಾ ಲೂತಿಮಠ ಮತ್ತಿತರರು ಉಪಸ್ಥಿತರಿದ್ದರು. ಶ್ರೀಶೈಲ ಮಠಪತಿ ಪರಿಚಯಿಸಿದರು. ರೇಖಾ ಗೋಗಿ ನಿರೂಪಿಸಿದರು.. ಸುಮಂಗಲಾ ಮೇಟಿ ವಂದಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net