ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

BKT NEWS 17-1
Published on

ಬಾಗಲಕೋಟೆ: ದೇಶದ ಭದ್ರತೆಗಾಗಿ ಹಾಗೂ ವಿವಿಧ ಯೋಜನೆಗಳ ರೂಪುರೇಷ ಸಿದ್ಧಪಡಿಸಲು ಜನಗಣತಿ ಕಾರ್ಯ ಅತಿ ಮಹತ್ವವಾಗಿದ್ದು, ಈ ಕಾರ್ಯದಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಸೂಚಿಸಿದರು.

ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಬಾಗಲಕೋಟೆ ಉಪವಿಭಾಗದ ಜನಗಣತಿ-2020ರ ಕ್ಷೇತ್ರ ತರಬೇತಿದಾರರಿಗೆ ಸೋಮವಾರ ಹಮ್ಮಿಕೊಂಡ 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ತರಬೇತಿದಾರರು ಸಂಪೂರ್ಣವಾಗಿ ಮಾಹಿತಿ ಪಡೆದು ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಬೇಕು ಎಂದರು.

ಜನಗಣತಿ ಕಾರ್ಯಾಚರಣೆಯಲ್ಲಿ ನಿಖರವಾದ ಮಾಹಿತಿ ಸಂಗ್ರಹಣೆ, ಗುಣಮಟ್ಟದ ಅಂಕಿ ಅಂಶಗಳು ಹೊರ ಬರಬೇಕಾದರೆ ತರಬೇತಿದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ತರಬೇತಿಯ ಕೌಶಲವನ್ನು ಆಧರಿಸುತ್ತದೆ. ಆದ್ದರಿಂದ ಎಲ್ಲ ತರಬೇತಿದಾರರು ಯಾವುದೇ ರೀತಿ ನಿರ್ಲಕ್ಷೃ ಧೋರಣೆ ಅನುಸರಿಸಬಾರದು ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ಕಿಟ್ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ರಾಜಶೇಖರಯ್ಯ, ಜನಗಣತಿಯ ಜಿಲ್ಲಾ ನೋಡಲ್ ಅಧಿಕಾರಿ ಶ್ಯಾಮ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ ಮತ್ತು ಜಮಖಂಡಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ವಿ. ಅಸ್ಕಿ ಸೇರಿ ಇತರರು ಉಪಸ್ಥಿತರಿದ್ದರು.

ಜಿಲ್ಲಾ ತರಬೇತಿ ಕಟ್ಟಡ ವೀಕ್ಷಣೆ
ಜಿಲ್ಲಾ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಜಿಲ್ಲಾ ತರಬೇತಿ ಸಂಸ್ಥೆಯ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿ ಅಗತ್ಯ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಬಾಕಿ ಉಳಿದ ಸಣ್ಣ ಪುಟ್ಟ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸಂಸ್ಥೆ ಪ್ರಾಚಾರ್ಯ ರಾಜಶೇಖರಯ್ಯ ಅವರಿಗೆ ಸೂಚನೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net