ಯಡಿಯೂರಪ್ಪ ನನ್ನ ಮನೆಮಗನಂತೆ ನೋಡ್ತಾರೆ

dvg Murugesh nirani press meet apr 11-
Published on

ಬಾಗಲಕೋಟೆ: ಜೂನ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಆಗ ನನ್ನ ಸಚಿವನ್ನಾಗಿ ಮಾಡಿದರೂ ಮಾಡದಿದ್ದರೂ ನನಗೆ ಒಂದು ಪರ್ಸೆಂಟ್ ಸಹ ಅಸಮಾಧಾನ ಆಗಲ್ಲ. ಯಡಿಯೂರಪ್ಪ ಅವರು ನನ್ನ ಮನೆಮಗನಂತೆ ನೋಡುತ್ತಾರೆ. ಮುರುಗೇಶ ನಿರಾಣಿ ಯಾರು ಎನ್ನುವುದು ಅವರಿಗೆ ಗೊತ್ತಿದೆ ಎಂದು ಬೀಳಗಿ ಶಾಸಕ ಮುರುಗೇಶ ನಿರಾಣಿ ಸ್ಪಷ್ಟವಾಗಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನಾನು ಅಸಮಾಧಾನ ಆಗಲ್ಲ. ಸಚಿವ ಸ್ಥಾನವೇ ದೊಡ್ಡದು ಅಂತ ನೀವೇಕೆ ಭಾವಿಸುತ್ತೀರಿ? ನಾನು ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದರು.
ಬೀಳಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೊಡುತ್ತಿದ್ದಾರೆ. ಮುಂದಿನ ಬಜೆಟ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಅಂದಾಜು 1500 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದೇನೆ. ಇಂತಹ ವೇಳೆ ಸಚಿವ ಸ್ಥಾನವೇ ಬೇಕು ಎಂದು ನಾನೇನು ಕೇಳಿಲ್ಲ. ಅವರು ಮಾಡಿದರೂ ಸಂತೋಷ ಮಾಡದೆ ಇದ್ದರೂ ಸಂತೋಷ ಎಂದರು.

ಇತ್ತೀಚಿಗೆ ವಚನಾನಂದ ಸ್ವಾಮೀಜಿ ನೀಡಿದ್ದ ಹೇಳಿಕೆಯಿಂದ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವುದು ಸರಿಯಲ್ಲ. ನನಗೆ ಮಾತ್ರವಲ್ಲ, ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಯ ಯಾರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ಮುಂದಿನ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದವರಾಗಿ ಬೇರೆ ದೇಶಕ್ಕೆ ಜೈ ಅನ್ನೋದು ಸರಿಯಲ್ಲ
ಭಾರತದ ದೇಶದಲ್ಲಿ ಇರುವ ಎಲ್ಲ ನಾಗರಿಕರಿಗೆ ಒಂದು ವಿನಂತಿ ಮಾಡುತ್ತೇನೆ. ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನ ಜಿಂದಾಬಾದ್ ಎನ್ನುವುದನ್ನು ಯಾರು ಸಹಿಸಲು ಸಾಧ್ಯವಿಲ್ಲ. ಇಲ್ಲಿನ ಅನ್ನ, ನೀರು ತಿಂದು, ಇಲ್ಲಿನ ರಸ್ತೆಯ ಮೇಲೆ ಓಡಾಡಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು ಯಾರಿಗೋ ಹುಟ್ಟಿ ಇನ್ಯಾರ ಹೆಸರು ಹೇಳುವುದಂತೆ ಆಗುತ್ತದೆ ಎಂದು ಖಾರವಾಗಿಯೇ ಹೇಳಿದರು.

ಭಾರತ ದೇಶದಲ್ಲಿ ಬದುಕುತ್ತೇನೆ ಎಂದರೆ ಈ ದೇಶಕ್ಕೆ ಮಾತ್ರ ಜೈಕಾರ ಹಾಕಬೇಕು. ಬೇರೆ ದೇಶಕ್ಕೆ ಜೈಕಾರ ಹಾಕಿದರೆ ಅಲ್ಲಿಗೆ ಹೋಗಲಿ. ದುಷ್ಕರ್ಮಿಗಳು ರಾಜಕೀಯಕ್ಕಾಗಿ ಇಂತ ಗಲಾಟೆ ಮಾಡುತ್ತಾರೆ. ಅದನ್ನು ಸಮರ್ಥವಾಗಿ ನಿಯಂತ್ರಿಸುವ ಶಕ್ತಿ ನಮ್ಮ ಕೇಂದ್ರ ಸರ್ಕಾರ, ಗೃಹಮಂತ್ರಿಗಳಿಗೆ ಇದೆ. ಅದನ್ನು ಅವರು ಮಾಡುತ್ತಾರೆ ಎಂದರು.

ಶೆಟ್ಟರ್ ಮನೆಯಲ್ಲಿ ರಾಜಕೀಯ ಸಭೆ ಮಾಡಿಲ್ಲ
ಇತ್ತೀಚಿಗೆ ಸಚಿವ ಜಗದೀಶ ಶೆಟ್ಟರ್ ಮನೆಯಲ್ಲಿ ಗೌಪ್ಯ ಸಭೆ ಮಾಡಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಅದೆಲ್ಲ ಮಾಧ್ಯಮಗಳ ಊಹಾಪೋಹ. ನಾನು ಶೆಟ್ಟರ್ ಮನೆಗೆ ಹೋಗಿದ್ದು ನಿಜ. ನನ್ನ ಫ್ಯಾಕ್ಟರಿ ಕೆಲಸಕ್ಕಾಗಿ ಅವರ ಬಳಿಗೆ ಹೋಗಿದ್ದೆ. ಅವರ ಎದುರು ನನ್ನ ಮೂರು ಫೈಲ್‌ಗಳು ಇವೆ. ಬೇಕಿದ್ದರೆ ನೀವು ದಾಖಲೆ ನೋಡಬಹುದು. ಅಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಯಾವುದೇ ಅಪಸ್ವರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net