

ಬಾಗಲಕೋಟೆ: ನಮ್ಮ ಜಿಲ್ಲೆಯಲ್ಲಿ ಏನೆಲ್ಲ ಮಹತ್ವ ಘಟನೆ ನಡೆದು ಹೋಗಿವೆ. ಅಬ್ಬಾ… ಎಂತಹ ವಿಷಯ ಸಾಕ್ಷೀಕರಿಸಿದೆ. ಇದೆಲ್ಲ ನಮಗೆ ಗೊತ್ತೆ ಇರಲಿಲ್ಲ. ನೋಡಿದ್ರೆ ಮನಸ್ಸು ಪುಳಕಿತಗೊಳ್ಳುತ್ತದೆ. ರೋಮಾಂಚನಕಾರಿ ಇತಿಹಾಸ ಇದೆ.!!
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ರಾಜ್ಯ ಪತ್ರಾಗಾರ ಇಲಾಖೆ, ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡಿರುವ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ದಾಖಲೆಗಳ ವೀಕ್ಷಿಸಿ ಸಂತಸಪಟ್ಟರು. ಇತಿಹಾಸದಲ್ಲಿ ಅಡಗಿರುವ ಅನೇಕ ಅಚ್ಚರಿಯ ಸಂಗತಿಗಳನ್ನು ಅರಿತು ಪರಸ್ಪರ ಚರ್ಚೆ ನಡೆಸಿದರು.
ಪ್ರದರ್ಶನದಲ್ಲಿ ಏನಿದೆ?
ಬಾಗಲಕೋಟೆ ಜಿಲ್ಲೆಯ ಲಂಬಾಣಿ ಜನರಿಗೆ 1938 ರಲ್ಲಿ ಕೈ ನೇಯ್ಗೆ ತರಬೇತಿಗೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬ್ರಿಟಿಷರ ಸರ್ಕಾರ ಬರೆದ ಆದೇಶ, ವೇಶ್ಯಾವಾಟಿಕೆ ತಡೆಗಟ್ಟಲು ಮುಂಬೈ ಸರ್ಕಾರಕ್ಕೆ 1939 ರಲ್ಲಿ ಸಾರ್ವಜನಿಕರು ಬರೆದ ಪತ್ರ, 1946 ರಲ್ಲಿ ಅಂದಿನ ವಿಜಯಪುರ ಜಿಲ್ಲೆಯ ಬಾಗಲಕೋಟೆ ವಿಭಾಗದಲ್ಲಿರುವ ಪೊಲೀಸ್ ಠಾಣೆಗಳ ವಿವರ, 1941 ರಲ್ಲಿ ಬಾಗಲಕೋಟೆಯಲ್ಲಿ ಕುರಿ ಸಾಕಣೆ ಸಂಶೋಧನಾ ಘಟಕ ಸ್ಥಾಪಿಸುವ ಆದೇಶ, 1946 ರಲ್ಲಿ ಬಿವಿವಿ ಸಂಘದ ಶಾಲೆಗೆ ಆಟದ ಮೈದಾನ ಹಾಗೂ ಕಟ್ಟಡಕ್ಕಾಗಿ ಕೃಷಿಯೇತರ ಮೌಲ್ಯಮಾಪನ ಭೂಮಿ ವಿನಾಯಿತಿ ನೀಡಿರುವ ಕುರಿತು ಆದೇಶ ಪ್ರತಿ, ಬನಹಟ್ಟಿ ಮುನಿಸಿಪಾಲ್ಟಿ ರದ್ದು ಪಡಿಸಿರುವುದು, ಬಾಗಲಕೋಟೆ ಎಪಿಎಂಸಿ ಸಮಿತಿ ಚುನಾವಣೆ, 1964 ರಲ್ಲಿ ಬಾಗಲಕೋಟೆ ಜಿಲ್ಲೆ ರಚಿಸುವ ಕುರಿತು ಬಾಗಲಕೋಟೆ ಜಿಲ್ಲೆಗೆ ಸಂಬಂಧಪಟ್ಟ ಮಹತ್ವದ ದಾಖಲೆಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು
ಪ್ರದರ್ಶನದಲ್ಲಿ ಮಹಾತ್ಮ ಗಾಂಧೀಜಿ ಕೈಗೊಂಡ ಹೋರಾಟ, ಅವರ ಪತ್ರಗಳು, ಸರ್.ಎಂ. ವಿಶ್ವೇಶ್ವರಯ್ಯ ವೇತನ, ನಿವೃತ್ತಿ ಆದೇಶ, ಕರ್ನಾಟಕದಲ್ಲಿ ಬ್ರಿಟಿಷ್ ಸರ್ಕಾರ ಅವಧಿಯಲ್ಲಿ ನಡೆದ ಪತ್ರ ವ್ಯವಹಾರಗಳು, ಆದೇಶಗಳು ಸೇರಿದಂತೆ ಅನೇಕ ದಾಖಲೆಗಳು ಪ್ರದರ್ಶನದಲ್ಲಿವೆ. ಅದರಲ್ಲೂ ಮೈಸೂರು ರಾಜಮನೆತನದ ರಾಜರು, ರಾಜ್ಯಕ್ಕೆ ನೀಡಿದ ಕೊಡುಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಜಿಲ್ಲೆಯ ಜಮಖಂಡಿ, ಮುಧೋಳ ಸಂಸ್ಥಾನ, ಮುಂಬೈ ಸರ್ಕಾರ ಅವಧಿಯಲ್ಲಿ ಆದ ಪ್ರದೇಶದ ಆದೇಶ, ನೀಡಿದ ಕೊಡುಗೆ ಹಾಗೂ ಸ್ವಾತಂತ್ರೃ ಹೋರಾಟಗಾರರ ಪರಿಚಯ ಬಗ್ಗೆ ಪ್ರದರ್ಶನದಲ್ಲಿ ಇರದಿರುವುದು ಇತಿಹಾಸ ತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಬೇಸರ ಉಂಟು ಮಾಡಿತು.
ಬಾಗಲಕೋಟೆ ನಗರದಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿರುವ ಈ ಪ್ರದರ್ಶನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಪೂರಕವಾದ ಅಂಶಗಳನ್ನು ಸಾಕ್ಷೀಕರಿಸಿತು. ಪ್ರಮುಖ ಚಾರಿತ್ರಿಕ ದಾಖಲೆಗಳ ಅನಾವರಣ ಇತಿಹಾಸ ಆಸಕ್ತರಿಗೆ ಖುಷಿ ನೀಡಿತು. ಈ ಭಾಗದ ಇನ್ನಷ್ಟು ಪ್ರಮುಖ ದಾಖಲೆಗಳ ಸಂಗ್ರಹಕ್ಕೆ ಆದ್ಯತೆ ನೀಡುವುದಾಗಿ ಪತ್ರಗಾರ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದರು.
ಸ್ವಾತಂತ್ರೃ ಪೂರ್ವ, ನಂತರ ಪ್ರಮುಖ ವಿಷಯಗಳ ದಾಖಲೆ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. 95 ಲಕ್ಷ ಪುಟಗಳ ದಾಖಲೆಗಳು ಇಲಾಖೆ ಸಂಗ್ರಹಿಸಿದೆ. ಮುಂಬೈ ಕರ್ನಾಟಕ ಭಾಗದ ಇನ್ನಷ್ಟು ದಾಖಲೆಗಳು ನಮಗೆ ದೊರೆಯಬೇಕಿದ್ದು, ಅವುಗಳ ಅನ್ವೇಷಣೆ ಮಾಡಲಾಗುವುದು. ದಾಖಲೆಗಳನ್ನು ಸಂಗ್ರಹಿಸಿ, ಸಂರಕ್ಷಿಸುವುದು ನಮ್ಮ ಆದ್ಯತೆ. ಇಲ್ಲಿನ ಪ್ರಮುಖ ವಿಷಯಗಳ ದಾಖಲೆಗಳನ್ನು ಸಾರ್ವಜನಿಕರು, ಇತಿಹಾಸ ತಜ್ಞರು ನೀಡಿದಲ್ಲಿ ಸಹಕಾರಿಯಾಗುತ್ತದೆ.
- ಎ. ರಾಜಮ್ಮ ಚೌಡರೆಡ್ಡಿ ನಿರ್ದೇಶಕಿ, ಡಾ. ಗವಿಸಿದ್ದಯ್ಯ ಉಪನಿರ್ದೇಶಕ ರಾಜ್ಯ ಪತ್ರಾಗಾರ ಇಲಾಖೆ
ಪ್ರದರ್ಶನ ನೋಡಿ ಖುಷಿ ಆಯಿತು. ಇತಿಹಾಸದಲ್ಲಿ ಅಡಕವಾಗಿರುವ ಪ್ರಮುಖ ಸಂಗತಿಗಳು ಅರಿವಿಗೆ ಬಂದವು. ಪ್ರತಿಯೊಂದು ಜಿಲ್ಲೆಯಲ್ಲಿ ಮ್ಯೂಜಿಯಂ ಸ್ಥಾಪಿಸಿ ಇತಿಹಾಸದ ದಾಖಲೆಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಬೇಕು. ನಮ್ಮ ಜಿಲ್ಲೆಗೆ ಸಂಬಂಧಿಸಿದ ದಾಖಲೆಗಳನ್ನು ಇನ್ನಷ್ಟು ಸಂಗ್ರಹಿಸಿ ಸಂರಕ್ಷಿಸಬೇಕು.
- ರಾಧಾ ಗುದಗಿ ಅನ್ನಪೂರ್ಣ ಕಾಟನಾಯಕ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು
EndFragment