ಪಕ್ಷ ಸಂಘಟನೆಗೆ ಹಿರಿಯರ ಚೈತನ್ಯ ಅಗತ್ಯ

BKT 111
Published on

ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಹಿರಿಯ ನಾಗರಿಕರಿಗಾಗಿ ವಿವಿಧ ಯೋಜನೆ ನೀಡಿವೆ. ಅವುಗಳನ್ನು ತಲುಪಿಸುವ ಕೆಲಸ ಸಂಘಟನೆ ಕಾರ್ಯಕರ್ತರು ಮಾಡಬೇಕಿದೆ. ಬಿಜೆಪಿ ಸಂಘಟನೆ ಇನ್ನಷ್ಟು ಬಲಗೊಳಿಸಲು ಹಿರಿಯರ ಚೈತನ್ಯ ಅಗತ್ಯವಾಗಿದೆ ಎಂದು ಬಿಜೆಪಿ ಹಿರಿಯ ನಾಗರಿಕರ ಪ್ರಕೋಷ್ಠ ರಾಜ್ಯ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಹಿರಿಯ ನಾಗರಿಕ ಪ್ರಕೋಷ್ಠದ ಬೆಳಗಾವಿ ವಿಭಾಗದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರಿಗಾಗಿ ಪಕ್ಷದಲ್ಲಿ ಪ್ರತ್ಯೇಕ ಪ್ರಕೋಷ್ಠ ಸ್ಥಾಪಿಸಿದ ಏಕೈಕ ಪಕ್ಷ ಬಿಜೆಪಿ. ಕಿರಿಯರ ಜತೆ ಹಿರಿಯರು ಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಹಿರಿಯ ನಾಗರಿಕರಿಗಾಗಿ ವಿಶೇಷ ಆದ್ಯತೆ ನೀಡುತ್ತದೆ ಎಂದರು.

ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ. ಇಲ್ಲಿನ 140 ಕೋಟಿ ಜನ ಸಂಖ್ಯೆಯಲ್ಲಿ ಶೇ.60 ರಷ್ಟು ಜನ 40 ವಯಸ್ಸಿ ಒಳಗಿನವರು ಇದ್ದಾರೆ. ದೇಶದ ಅಭಿವೃದ್ಧಿಗೆ ಯುವಕರ ಬೆನ್ನಿಗೆ ಹಿರಿಯರ ಅನುಭವ ಕೂಡ ಬೇಕು. ವಯಸ್ಸಿನ ಆಧಾರದ ಮೇಲೆ ಬಿಜೆಪಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರದಲ್ಲಿ ಅಧಿಕಾರ ವಹಿಸಬೇಕಾದರು ವಯಸ್ಸಿನ ಮಾನದಂಡ ಪಕ್ಷ ಅನುಸರಿಸುತ್ತಿದೆ ಎಂದು ಹೇಳಿದರು.

ಜನ ಸಂಘದ ಆಶ್ರಯದಲ್ಲಿ ಬಿಜೆಪಿ ಬೆಳೆದು ಬಂದಿದೆ. ಆರಂಭದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸಾವಿರ ವೋಟ್ ಕೂಡ ಬರುತ್ತಿರಲಿಲ್ಲ. ಅನೇಕ ಜನ ಕಾರ್ಯಕರ್ತರು ತಮ್ಮ ಜೀವನವನ್ನು ಪಕ್ಷಕ್ಕಾಗಿ ಮೀಸಲಿಟ್ಟ ಪರಿಣಾಮ ಇಂದು ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಅಂದಿನ ಕಾರ್ಯಕರ್ತರು ಇಂದು ಹಿರಿಯ ನಾಗರಿಕರಾಗಿದ್ದಾರೆ. ಅವರನ್ನು ಜತೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಿರಿಯರ ಚೈತನ್ಯ ಬಳಸಿಕೊಂಡು ಪಕ್ಷ ಸಂಘಟನೆ ಮಾಡುವುದು ಈ ಪ್ರಕೋಷ್ಠದ ಉದ್ದೇಶ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಹಳೇ ಬೇರು-ಹೊಸ ಚಿಗುರು ಇದ್ದಾಗಲೇ ಪಕ್ಷವು ಹೆಮ್ಮರವಾಗಲು ಸಾಧ್ಯ ಎಂದು ಹೇಳಿದರು. ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ, ಗುಂಡುರಾವ ಸಿಂಧೆ, ನರೇಂದ್ರ ಕುಪ್ಪಸ್ತ, ರಾಜು ಮುದೇನೂರ ಇತರರು ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net