ಖಾಸಗಿ ಕಂಪನಿಯಿಂದ ಕಳಪೆ ಬಾಳೆ ಸಸಿ ವಿತರಣೆ

bkt-16-12
Published on

ಅಶೋಕ ಶೆಟ್ಟರ
ಬಾಗಲಕೋಟೆ: ಬೆಳೆದ ಬಾಳೆಗೆ ಬೆಲೆ ಸಿಗುತ್ತಿಲ್ಲ ಎಂದು ಬಾಳೆ ಬೆಳೆಗಾರರು ಕಣ್ಣೀರು ಹಾಕುತ್ತಿರುವ ಬೆನ್ನಲ್ಲಿಯೇ ಇದೀಗ ಖಾಸಗಿ ಕಂಪನಿಯಿಂದ ಖರೀದಿಸಿರುವ ಬಾಳೆ ಸಸಿಗಳು ಕಳಪೆ ಆಗಿದ್ದರಿಂದ ಮತ್ತಷ್ಟು ಬಾಳೆ ಬೆಳೆಗಾರರ ತೀವ್ರ ಹಾನಿ ಅನುಭವಿಸುವ ಪ್ರಸಂಗ ಎದುರಾಗಿದೆ.

ಜಿಲ್ಲೆಯ ಬೀಳಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಅಂದಾಜು 60 ರಿಂದ 70 ಎಕರೆ ನಾಟಿ ಮಾಡಿದ್ದ ಬಾಳೆ ಸಸಿಗಳು ಒಂದೇ ತಳಿಯಿಂದ ಕೂಡಿರದೆ ಭಿನ್ನ ವಿಭಿನ್ನ ತಳಿಗಳ ಮಿಶ್ರಣ ಆಗಿದ್ದರಿಂದ ಬಾಳೆ ಇದೀಗ ಗಿಡದಲ್ಲಿಯೇ ಕೊಳೆಯಲಾರಂಭಿಸಿದೆ.

ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಈ ಬಾಳೆಯ ಆಯಸ್ಸು ಅತ್ಯಂತ ಕಡಿಮೆ ಇರುವುದರಿಂದ ಆ ಬಾಳೆಗೊನೆ ಖರೀದಿಸಲು ವರ್ತಕರೇ ಮುಂದೆ ಬರುತ್ತಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಪ್ರತಿಷ್ಠಿತ ಖಾಸಗಿ ಕಂಪನಿ ಆಗಿದ್ದರಿಂದ ಅವರು ಹೇಳಿದ ಬೆಲೆಗೆ ಬಾಳೆ ಸಸಿಯನ್ನು ಖರೀದಿಸಿದ್ದೇವೆ. ಆದರೆ, ನಮ್ಮ ವಿಶ್ವಾಸಕ್ಕೆ ದ್ರೋಹ ಆಗಿದೆ. ಹೀಗಾಗಿ ಪ್ರತಿ ಎಕರೆಗೆ ಕನಿಷ್ಠ ಎರಡ್ಮೂರು ಲಕ್ಷ ರೂ. ನಂತೆ ನಷ್ಟವಾಗಿದೆ. ಒಟ್ಟಾರೆ, ಸಸಿಗಳು, ಡ್ರಿಪ್, ಕೂಲಿ, ನಿರ್ವಹಣೆ ಎಲ್ಲವೂ ಸೇರಿ ಅಂದಾಜು 60 ಲಕ್ಷ ರೂ. ನಷ್ಟು ಹಾನಿ ಆಗಿದ್ದು, ಎರಡೂವರೆ ಕೋಟಿ ರೂ. ನಷ್ಟು ಬರಬೇಕಿದ್ದ ಬಾಳೆ ಹಾನಿಯಾಗಿದೆ ಎನ್ನುವುದು ಬಾಳೆ ಬೆಳೆಗಾರರ ಆರೋಪ.
ಕಂಪನಿ ಕೊಟ್ಟಿದ್ದ ಸಸಿಗಳಲ್ಲಿ ವ್ಯತ್ಯಾಸ ಆಗಿದ್ದು, ಇದರಿಂದ ನಮ್ಮ ಬಾಳೆ ಹಾಳಾಗುತ್ತಿದೆ ಎಂದು ಈಗಾಗಲೇ ಸಸಿ ಖರೀದಿಸಿದ್ದ ಕಂಪನಿ ಅಧಿಕಾರಿಗಳಿಗೆ ರೈತರು ದೂರು ನೀಡಿದ್ದರು. ಆದರೆ, ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಅವರು ತಮ್ಮ ತಪ್ಪಿಲ್ಲ, ನಿರ್ವಹಣೆಯಲ್ಲಿ ತೊಂದರೆ ಆಗಿದೆ ಎಂದು ಹೇಳಿ ಹೋಗಿದ್ದಾರಂತೆ. ಇದು ನ್ಯಾಯಯುತ ಅಧ್ಯಯನ ಆಗಿಲ್ಲ ಎಂಬುದು ಬಾಳೆ ಬೆಳೆಗಾರರ ದೂರು.

ಇದೇ ವಿಚಾರವಾಗಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೀಳಗಿ ಹಾಗೂ ಮುಧೋಳ ತಾಲೂಕಿನಲ್ಲಿ ಬೆಳೆದಿರುವ ಈ ತಳಿಯ ಬಾಳೆ ತೋಟಗಳಿಗೆ ಭೇಟಿ ನೀಡಿ, ಆ ಬಗ್ಗೆ ಪರಿಶೀಲಿಸಿ ವರದಿ ನೀಡಿದ್ದು, ವಿಜ್ಞಾನಿಗಳು ನೀಡಿರುವ ವರದಿಯಲ್ಲಿ ಸಸಿಗಳ ದೋಷ ಇರುವುದು ಕಂಡು ಬಂದಿದೆ.

ಒಂದೇ ತಳಿಯ ಸಸಿಗಳನ್ನು ಕೊಟ್ಟಿಲ್ಲ. ವಿಭಿನ್ನವಾದ ಸಸಿಗಳು ಇದರಲ್ಲಿ ಸೇರಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಶೇ. 20 ರಿಂದ ಹಿಡಿದು ಶೇ. 50ಕ್ಕೂ ಅಧಿಕ ಪ್ರಮಾಣದಲ್ಲಿ ಸಸಿಗಳು ವಿಭಿನ್ನವಾಗಿವೆ ಎಂದು ಹೇಳಿದ್ದಾರೆ. ಇದರಿಂದ ನಮಗೆ ಸಸಿ ವಿತರಿಸಿದ ಕಂಪನಿ ಆಗಿರುವ ಹಾನಿಯನ್ನು ತುಂಬಿಕೊಡಬೇಕು. ಇಲ್ಲವಾದಲ್ಲಿ ನಾವು ಗ್ರಾಹಕರ ಕೋರ್ಟ್‌ಗೆ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಸುನಗ ಗ್ರಾಮದ ಬಾಳೆ ಬೆಳೆಗಾರ ಸಾಬಣ್ಣ ಬನ್ನೆಪ್ಪನವರ ತಿಳಿಸಿದ್ದಾರೆ.

ಏನಾಗಿದೆ ತೊಂದರೆ?
ರೈತರು ಹೇಳಿದ್ದ ತಳಿಯ ಸಸಿಗಳೇ ಎಲ್ಲವೂ ಇದ್ದಿದ್ದರೆ ಒಂದೇ ತೆರನಾಗಿ ಸರಾಸರಿ 25 ರಿಂದ 30 ಕೆಜಿ ಬಾಳೆ ತುಂಬಿದ ಗೊನೆಗಳು ಬರುತ್ತಿದ್ದವು. ಅವುಗಳ ತೊಗಟೆ ದಪ್ಪ ಇದ್ದು, ಬೇಗನೇ ಕೆಡುತ್ತಿರಲಿಲ್ಲ. ಆದರೆ, ಮಿಶ್ರ ತಳಿಗಳು ಸೇರಿದ್ದರಿಂದ ಆ ವಿಭಿನ್ನ ತಳಿಯ ಗಿಡಗಳಲ್ಲಿ ಕೇವಲ ನಾಲ್ಕೈದು ಕೆಜಿ ಬಾಳೆಗೊನೆಗಳು ಇಳುವರಿ ಬರುತ್ತಿದೆ. ಅಲ್ಲದೆ, ತೊಗಟೆ ಅತ್ಯಂತ ತೆಳುವಾಗಿದ್ದರಿಂದ ಅದನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲು ಆಗಲ್ಲ, ಒಂದೆರಡು ದಿನದಲ್ಲಿ ಹಣ್ಣು ಕೊಳೆಯುತ್ತಿದೆ. ಇದರಿಂದ ತಮಗೆ ಲಾಸ್ ಆಗುತ್ತಿದೆ ಎಂದು ವರ್ತಕರು ಹಣ್ಣು ಖರೀದಿ ಮಾಡುತ್ತಿಲ್ಲವಂತೆ. ಇದರಿಂದ ಬಾಳೆ ತೋಟದಲ್ಲಿ ಗಿಡಗಳಲ್ಲೆ ಹಣ್ಣು ಸಂಪೂರ್ಣ ಕೊಳೆತು ಹೋಗಿದೆ. ಹೀಗಾಗಿ ತಮಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಇದಕ್ಕೆ ನಮಗೆ ಸಸಿ ವಿತರಿಸಿದ ಖಾಸಗಿ ಕಂಪನಿಯೇ ಕಾರಣವಾಗಿದ್ದು, ಅವರು ನಮಗೆ ಹಾನಿ ತುಂಬಿಕೊಡಬೇಕು ಎಂದು ಬೀಳಗಿ ಪಟ್ಟಣದ ಬಾಳೆ ಬೆಳೆಗಾರ ರವಿ ಪಾಟೀಲ ಅವರ ಹಕ್ಕೊತ್ತಾಯ ಆಗಿದೆ.

ಬೀಳಗಿ ತಾಲೂಕಿನಲ್ಲಿ 50ಕ್ಕೂ ಹೆಚ್ಚು ರೈತರು ಈ ಬಾಳೆ ಬೆಳೆದಿದ್ದೇವೆ. ಕಳಪೆ ಗುಣಮಟ್ಟದ ಸಸಿಗಳಿಂದಾಗಿ ನಾವೆಲ್ಲ ಭಾರಿ ಮೋಸಕ್ಕೆ ಸಿಕ್ಕು, ಲಕ್ಷಾಂತರ ಸಾಲದ ಸುಳಿಗೆ ಸಿಲುಕಿದ್ದೇವೆ. ನಮ್ಮ ಬದುಕಿಗೆ ಬರೆ ಬಿದ್ದಿದೆ. ಈ ಕೂಡಲೇ ಸರ್ಕಾರ ಸಂಬಂಧಪಟ್ಟ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು.
ರವಿ ಶಿವನಗೌಡ ಪಾಟೀಲ ಬಾಳೆ ಸಸಿ ಖರೀದಿಸಿ ಹಾನಿ ಅನುಭವಿಸಿರುವ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net