

ಅಶೋಕ ಶೆಟ್ಟರ,
ಬಾಗಲಕೋಟೆ: ತೀವ್ರ ಕುತೂಹಲ ಮೂಡಿಸಿದ್ದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಇಳಿದಿದ್ದ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು ಗೆಲುವಿನ ನಗೆಬೀರಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿ ಮತ್ತೊಮ್ಮೆ ವಿಜಯಮಾಲೆ ಧರಿಸಿದ್ದಾರೆ.
ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸಚಿವ ಎಚ್.ವೈ.ಮೇಟಿ, ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮರು ಆಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮತ್ತು ಜಮಖಂಡಿ ಶಾಸಕ ಸಿದ್ದು ಸವದಿ ಹೊಸದಾಗಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಅಖಾಡದಲ್ಲಿ ಇದ್ದ ಎಲ್ಲ ಹಾಲಿ, ಮಾಜಿ ಶಾಸಕರಿಗೆ ಮತದಾರ ಪ್ರಭುಗಳು ಜೈಕಾರ ಹಾಕಿದ್ದಾರೆ.
ಅಣ್ಣ ಗೆದ್ದ ತಮ್ಮ ಸೋತ
ಡಿಸಿಸಿ ಬ್ಯಾಂಕ್ ಚುನಾವಣೆಗೆ ರಬಕವಿ-ಬನಹಟ್ಟಿ ಪಿಕೆಪಿಎಸ್‌ನಿಂದ ಶಾಸಕ ಸಿದ್ದು ಸವದಿ ಸ್ಪರ್ಧೆ ಮಾಡಿದ್ದರೆ ಪಕ್ಕದ ಜಮಖಂಡಿ ಕ್ಷೇತ್ರದಿಂದ ಅವರ ಸಹೋದರ ಯೋಗಪ್ಪ ಸವದಿ ಸ್ಪರ್ಧೆ ಮಾಡಿದ್ದರು. ಆದರೆ, ಬ್ಯಾಂಕ್ ಎಂಟ್ರಿ ಪಡೆಯುವಲ್ಲಿ ಶಾಸಕ ಸಿದ್ದು ಸವದಿ ಯಶಸ್ವಿ ಆಗಿದ್ದರೆ, ಅವರ ಸಹೋದರ ಯೋಗಪ್ಪ ಅವರು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ವಿರುದ್ಧ ಪರಾಭವಗೊಂಡಿದ್ದು, ಸವದಿ ಕುಟುಂಬಕ್ಕೆ ಫಲಿತಾಂಶ ಬೇವು-ಬೆಲ್ಲವನ್ನು ಹಂಚಿದೆ.
ಸೋತ ಸಹೋದರರು
ಇನ್ನು ಪಟ್ಟಣ ಸಹಕಾರ ಬ್ಯಾಂಕ್/ಭಿನ್ನಶೇತ್ಕಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವಾನಂದ ಉದಪುಡಿ ಹಾಗೂ ಮುಧೋಳ ಪಿಕೆಪಿಎಸ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿಪಂ ಸದಸ್ಯ ಮಹಾಂತೇಶ ಉದಪುಡಿ ಇಬ್ಬರು ಸೋಲು ಅನುಭವಿಸಿದ್ದಾರೆ.
ಪ್ರಕಾಶಿಸಿದ ತಪಶೆಟ್ಟಿ
ಕಳೆದ ಸಲದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅನುಭವಿ ಸಹಕಾರಿ, ಬಸವೇಶ್ವರ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಈ ಚುನಾವಣೆಯಲ್ಲಿ ಮತ್ತೆ ಪ್ರಕಾಶಿಸಿದ್ದಾರೆ. ಎದುರಾಳಿ ಅಭ್ಯರ್ಥಿ ಶಿವಾನಂದ ಉದಪುಡಿ ವಿರುದ್ಧ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ.
ಲಾಟರಿ ವಿಜಯ
ಇಡೀ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹುನಗುಂದ ಪಿಕೆಪಿಎಸ್ ಚುನಾವಣೆಯಲ್ಲಿ ಬಿಜೆಪಿಯ ವೀರೇಶ ಉಂಡೋಡಿ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅದೃಷ್ಟದ ಗೆಲುವು ದಾಖಲಿಸಿದ್ದಾರೆ. ಒಟ್ಟು 26 ಮತಗಳಲ್ಲಿ ಇಬ್ಬರಿಗೂ ತಲಾ 13 ಮತಗಳು ಬಂದಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರಲ್ಲಿ ಸಾಕಷ್ಟು ಟೆನ್ಶನ್ ಉಂಟು ಮಾಡಿತ್ತು. ಅಂತಿಮವಾಗಿ ಚೀಟಿ ಎತ್ತಿದಾಗ ಕಾಶಪ್ಪನವರಿಗೆ ವಿಜಯಮಾಲೆ ಕೊರಳಿಗೆ ಬಿತ್ತು.
ಪಕ್ಷದ ಅಸ್ಪಷ್ಟತೆ ಡಾ.ದಡ್ಡೇನವರಿಗೆ ಉರುಳು
ಎಲ್ಲ ನೇಕಾರರ ಕ್ಷೇತ್ರದಿಂದ ಮರುಆಯ್ಕೆ ಬಯಸಿ ಡಾ.ಎಂ.ಎಸ್.ದಡ್ಡೇನವರಿಗೆ ಫಲಿತಾಂಶ ತೀವ್ರ ನಿರಾಸೆ ಮೂಡಿಸಿತು. ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲ ಯಾರಿಗೆ ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕಣದಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಡಾ.ಎಂ.ಎಸ್.ದಡ್ಡೇನವರ ಜೊತೆಗೆ ಮುರುಗೇಶ ಕಡ್ಲಿಮಟ್ಟಿ ಸಹ ಸ್ಪರ್ಧೆ ಮಾಡಿದ್ದರು. ಪಕ್ಷದ ಮುಖಂಡರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಯಾರಿಗೆ ತಮ್ಮ ಬೆಂಬಲ ಎಂದು ಸ್ಪಷ್ಟವಾಗಿ ಹೇಳದ್ದರಿಂದ ಅಂತಿಮವಾಗಿ ಮುರುಗೇಶ ಕಡ್ಲಿಮಟ್ಟಿ ಗೆಲುವು ದಾಖಲಿಸಿದರೆ ಡಾ.ದಡ್ಡೇನವರ 3ನೇ ಸ್ಥಾನಕ್ಕೆ ಕುಸಿದರು. ಪಕ್ಷದ ಕೆಲ ಮುಖಂಡರ ನಡೆಯೇ ಅವರಿಗೆ ಉರುಳಾಯಿತು.
ಫಲಿಸದ ಗೌಡರ ತಂತ್ರ, ಗೆದ್ದ ಕುಮಾರ
ಬಾದಾಮಿ ಪಿಕೆಪಿಎಸ್ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಕುಮಾರ ಜನಾಲಿ ಮರು ಆಯ್ಕೆ ಬಯಸಿದ್ದರು. ಅವರಿಗೆ ಪಕ್ಷ ಮಣೆ ಹಾಕದೇ ಎಚ್.ಎಲ್.ಗೌಡರ ಅವರನ್ನು ಬೆಂಬಲಿಸಿತು. ಕ್ಷೇತ್ರದ ಮತದಾರರ ಮೇಲೆ ಹಿಡಿತ ಹೊಂದಿದ್ದ ಕುಮಾರ ಜನಾಲಿ ಅವರನ್ನು ಸೋಲಿಸಬೇಕು ಎನ್ನುವ ಬಿಜೆಪಿ ಮುಖಂಡರ ಯಾವುದೇ ತಂತ್ರಗಳು ಫಲ ನೀಡಲಿಲ್ಲ. ಮುಖ್ಯವಾಗಿ ಸಂಸದ ಪಿ.ಸಿ.ಗದ್ದಿಗೌಡರ ಅವರು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಾಕಷ್ಟು ಬೆವರು ಹರಿಸಿದ್ದರೂ ಸಹ ಅವರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇನ್ನು ಈ ಕ್ಷೇತ್ರದಲ್ಲಿ ಶಾಸಕ ಸಿದ್ದರಾಮಯ್ಯ ಅವರ ಅಣತಿ ಮೇರೆಗೆ ಡಾ.ಎಂ.ಜಿ.ಕಿತ್ತಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೂ ಅವರ ಸ್ಪರ್ಧೆ ಬರೀ ನೆಪಕ್ಕೆ ಮಾತ್ರ ಎನ್ನುವಂತಾಗಿತ್ತು. ಹೀಗಾಗಿ ಅವರು ನಿರೀಕ್ಷೆಯಂತೆ ಮೂರನೇ ಸ್ಥಾನಕ್ಕೆ ಇಳಿದರು.
ಮೂವರು ಹಾಲಿ ನಿರ್ದೇಶಕರಿಗೆ ಸೋಲು
ಕಳೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ 10 ಜನರು ಮರು ಆಯ್ಕೆ ಬಯಸಿ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದ ಶಿವಾನಂದ ಉದಪುಡಿ, ನಿರ್ದೇಶಕರಾಗಿದ್ದ ಡಾ.ಎಂ.ಎಸ್.ದಡ್ಡೇನವರ ಹಾಗೂ ಭೀಮಸಿ ಮುಗದುಮ್ ಸೋಲು ಅನುಭವಿಸಿದ್ದಾರೆ.
ಹಾಗೆಯೇ ಬ್ಯಾಂಕ್ ಅಧ್ಯಕ್ಷರಾಗಿದ್ದ ಅಜಯಕುಮಾರ ಸರನಾಯಕ ಅವಿರೋಧ ಆಯ್ಕೆ ಆಗಿದ್ದರು. ಗುರುವಾರ ನಡೆದ ಚುನಾವಣೆಯಲ್ಲಿ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಕುಮಾರ ಜನಾಲಿ ಮರು ಆಯ್ಕೆ ಅಗಿದ್ದಾರೆ.
ಇನ್ನು ಇದೆ ಡಿಸಿಸಿ ಡಿಶುಂ ಡಿಶುಂ
ಡಿಸಿಸಿ ಬ್ಯಾಂಕ್‌ಗೆ ಸದ್ಯ ನಡೆದಿದ್ದ ನಿರ್ದೇಶಕರ ಆಯ್ಕೆ ಚುನಾವಣೆ ಮುಗಿದಿದೆ. ಆದರೆ, ಬ್ಯಾಂಕ್‌ನ ಅಧಿಕಾರ ಗದ್ದುಗೆ ಯಾವ ಪಕ್ಷದ ಪಾಲಾಗುತ್ತದೆ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಗದ್ದುಗೆ ಗುದ್ದಾಟ ನಡೆಯಲಿದೆ.
ಗುರುವಾರದ ನಡೆದ 11 ಸ್ಥಾನಗಳಲ್ಲಿ ಬಿಜೆಪಿ ಐದು ಕಡೆಗೆ ಗೆದ್ದು ಬೀಗಿದ್ದರೆ ಕಾಂಗ್ರೆಸ್ 4 ಕಡೆಗೆ ವಿಜಯದ ನಗೆ ಬೀರಿದೆ. ಇನ್ನು ಎರಡು ಕಡೆಗೆ ಗೆದ್ದಿರುವ ಅಭ್ಯರ್ಥಿಗಳಲ್ಲಿ ಒಬ್ಬರು ಬಿಜೆಪಿ ಮತ್ತೊಬ್ಬರು ಕಾಂಗ್ರೆಸ್ ಮುಖಂಡರು ಇದ್ದಾರೆ. ಸದ್ಯಕ್ಕೆ ಅವರ ನಿಲುವು ಏನು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಹಾಗೆಯೇ ಅವಿರೋಧವಾಗಿ ಆಯ್ಕೆ ಆಗಿರುವ ಇಬ್ಬರು ಕಾಂಗ್ರೆಸ್ ಪಕ್ಷದವರು ಇದ್ದಾರೆ. ಇದರಿಂದ ಒಟ್ಟು 13 ನಿರ್ದೇಶಕರ ಪೈಕಿ 6 ಕಾಂಗ್ರೆಸ್, 5 ಬಿಜೆಪಿ ಹಾಗೂ ಇಬ್ಬರು ಸದ್ಯಕ್ಕೆ ಸ್ವತಂತ್ರರು ಇದ್ದಾರೆ. ಹೀಗಾಗಿ ಯಾವ ಪಕ್ಷದ ಹಿಡಿತಕ್ಕೆ ಬ್ಯಾಂಕ್ ಆಡಳಿತ ಎನ್ನುವುದು ಸದ್ಯ ನಿಗೂಢ!