ಗ್ರಾಮ ಪಂಚಾಯಿತಿ: ಪತ್ನಿಯರ ಅಧಿಕಾರದಲ್ಲಿ ಗಂಡಂದಿರು ದರ್ಬಾರ್ ಮಾಡಬೇಡಿ

BKT 4-2
Published on

ಬಾಗಲಕೋಟೆ: ತಮ್ಮ ಸ್ವಕ್ಷೇತ್ರ ಬಾದಾಮಿಯಲ್ಲಿ ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಪಂ ಸದಸ್ಯರನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಉತ್ಸಾಹದಲ್ಲಿರುವ ಶಾಸಕ ಸಿದ್ದರಾಮಯ್ಯ ಸೋಮವಾರ ಪಕ್ಷದ ಬೆಂಬಲಿತ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಸಿದರು.

ಬಾದಾಮಿಯ ಶಾಸಕರ ಕಚೇರಿ ಎದುರಿನ ಅವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಪಕ್ಷದ ಬೆಂಬಲಿತ ಸದಸ್ಯರನ್ನು ಸನ್ಮಾನಿಸಿ, ನೂತನ ಸದಸ್ಯರಿಗೆ 40 ನಿಮಿಷದ ಕ್ಲಾಸ್ ತೆಗೆದುಕೊಂಡರು. ಸದಸ್ಯರಿಗೆ ಪ್ರಾಮಾಣಿಕತೆ, ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ಪಾಠ ಮಾಡಿದರು.

ಮುಖ್ಯವಾಗಿ ಪಂಚಾಯಿತಿಯಲ್ಲಿ ನೀವೇ ಯಜಮಾನರು, ನಿಮ್ಮ ಹಿಂದೆ ಪಿಡಿಒ, ಕಾರ್ಯದರ್ಶಿಗಳು ಇರಬೇಕು. ಅವರ ಹಿಂದೆ ನೀವು ಹೋಗಬೇಡಿ. ನಿಮ್ಮ ಮಾತು ಕೇಳದ ಪಿಡಿಒ ಇದ್ದರೆ ಎಲ್ಲರೂ ಸೇರಿ ಅವರನ್ನು ಪಂಚಾಯಿತಿಯಿಂದ ರಿಲೀವ್ ಮಾಡಲು ಠರಾವು ಮಾಡಿ ಎಂದು ಸಲಹೆ ನೀಡಿದರು.

ಪಂಚಾಯಿತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆ ಆಗಿದ್ದಾರೆ. ಹಾಗೆಂದು ಪಂಚಾಯಿತಿಯಲ್ಲಿ ಗಂಡಂದಿರುವ ದರ್ಬಾರ್ ಮಾಡಬಾರದು. ಮಹಿಳಾ ಸದಸ್ಯರಿಗೆ ದರ್ಬಾರ್ ನಡೆಸಲು ಬಿಡಬೇಕು. ಅವರಿಗೆ ಗೊತ್ತಾಗಲ್ಲ ಎನ್ನುವುದು ಸರಿಯಲ್ಲ. ಒಂದು ಮನೆಯನ್ನೆ ಚೆನ್ನಾಗಿ ನಡೆಸುವ ಮಹಿಳೆ ಪಂಚಾಯಿತಿ ನಡೆಸಿಕೊಂಡು ಹೋಗಲು ಆಗಲ್ವಾ ಎಂದು ಪ್ರಶ್ನಿಸಿದ ಅವರು, ಮಹಿಳೆಯರಲ್ಲಿ ರಾಜಕೀಯವಾಗಿ ನಾಯಕತ್ವ ಬೆಳೆಯಬೇಕು ಎಂದೇ ಪಂಚಾಯಿತಿಯಲ್ಲಿ ಶೇ.50 ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.

ಅಧ್ಯಕ್ಷ, ಉಪಾಧ್ಯಕ್ಷರಿಗೆ ವಿಶೇಷ ತರಬೇತಿ
ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಮುಂದಿನ ತಿಂಗಳು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಮೀಸಲಾತಿ ಅನ್ವಯ ಆಯ್ಕೆ ಆಗಲಿ. ಈ ವೇಳೆ ನಿಮಗೆ ಕೈಮುಗಿದು ಬೇಡುತ್ತೇನೆ. ಬಿಜೆಪಿಯವರು ಆಮಿಷವೊಡ್ಡಿ ನಿಮ್ಮನ್ನು ಸೆಳೆಯುತ್ತಾರೆ. ಈಗಾಗಲೇ ವ್ಯಾಪಾರ ಆರಂಭಿಸಿದ್ದಾರೆ. ಅವರ ವ್ಯಾಪಾರಕ್ಕೆ ಬಲಿಯಾಗಬಾರದು ಎಂದು ಕೋರಿದರು.

ನಮ್ಮ ಪಕ್ಷದ ಬೆಂಬಲಿತರು ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ವಿಶೇಷವಾಗಿ ಒಂದು ತರಬೇತಿ ಕ್ಯಾಂಪ್ ಮಾಡಿಸುತ್ತೇನೆ. ಅದಕ್ಕೆ ಒಬ್ಬ ವಕೀಲರನ್ನು ಕರೆದುಕೊಂಡು ಬಂದು ತರಬೇತಿ ಕೊಡೆಸುತ್ತೇನೆ. ನಾನು ಲಾಯರ್ ಇದ್ದೇನೆ. ನಾನೇ ಹೇಳಬಹುದಿತ್ತು. ಆದರೆ, ಹಿತ್ತಲ ಗಿಡ ಮದ್ದಲ್ಲ ಅಂತಾರಲ್ಲ, ಹೀಗಾಗಿ ಬೇರೆ ಲಾಯರ್ ಟ್ರೇನಿಂಗ್ ಕೊಡುತ್ತಾರೆ. ಹಾಗೆಯೇ ನಮ್ಮ ಪಕ್ಷದ ಬೆಂಬಲಿತ ಸದಸ್ಯರಿಗೂ ಇನ್ನೊಂದು ಪ್ರತ್ಯೇಕ ತರಬೇತಿ ಕೊಡೆಸಲಾಗುವುದು. ಇದರಿಂದ ಪಂಚಾಯಿತಿಯಲ್ಲಿ ಹೇಗೆ ಅಧಿಕಾರ ನಡೆಸಬೇಕು. ಜವಾಬ್ದಾರಿಗಳೇನು? ಕರ್ತವ್ಯಗಳೇನು ಎನ್ನುವ ತರಬೇತಿ ಕೊಡಲಾಗುವುದು. ಅದರಂತೆ ಉತ್ತಮ ಆಡಳಿತ ನಡೆಸಿ, ಗ್ರಾಮ ಅಭಿವೃದ್ಧಿ ಪಡಿಸಬೇಕು. ಪಂಚಾಯಿತಿಯಲ್ಲಿ ತಪ್ಪುಗಳು ಆದಾಗ ಅದನ್ನು ತಪ್ಪು ಎಂದು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮತ್ತಿತರರು ಇದ್ದರು.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿತರು ಶೇ.60ಕ್ಕೂ ಹೆಚ್ಚು ಸದಸ್ಯರು ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ. ಆದರೆ, ಬಿಜೆಪಿಯವರು ನಾವೇ ಗೆದ್ದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಂಬರುವ ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ, ವಿಧಾನ ಪರಿಷತ್ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ.
- ಎಸ್.ಆರ್.ಪಾಟೀಲ ವಿಧಾನ ಪರಿಷತ್ ವಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net