ಹೊಂದಾಣಿಕೆ ಗುಟ್ಟು ಮತ್ತೊಮ್ಮೆ ಬಹಿರಂಗ!

siddu savadi mar 20
Published on

ಬಾಗಲಕೋಟೆ: ರಾಜ್ಯ ಸಹಕಾರ ಅಪೇಕ್ಸ್ ಬ್ಯಾಂಕ್‌ಗೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ, ತೇರದಾಳ ಶಾಸಕ ಸಿದ್ದು ಸವದಿ ಅವಿರೋಧವಾಗಿ ಆಯ್ಕೆಯಾದರು.

ನವನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೂತನ ನಿರ್ದೇಶಕ ಮಂಡಳಿಯ ಪ್ರಥಮ ಸಭೆಯಲ್ಲಿ ಸರ್ವಾನುಮತದಿಂದ ಈ ಅವಿರೋಧ ಆಯ್ಕೆ ನಡೆಯಿತು.

ಕಳೆದ ವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕ ಅಧ್ಯಕ್ಷರಾಗಿ, ಮುರುಗೇಶ ಕಡ್ಲಿಮಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆ ಜಿಲ್ಲೆಯ ಸಹಕಾರಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟು ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು. ಶನಿವಾರ ನಡೆದ ನೂತನ ಆಡಳಿತ ಮೊದಲ ಸಭೆಯಲ್ಲಿ ಅಪೇಕ್ಸ್ ಬ್ಯಾಂಕ್‌ಗೆ ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ಶಾಸಕ ಸಿದ್ದು ಸವದಿ ಅವರನ್ನು ಆಯ್ಕೆ ಮಾಡಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ಸಹಕಾರಿ ರಂಗದ ಹೊಂದಾಣಿಕೆ ರಾಜಕಾರಣ ಮತ್ತೊಮ್ಮೆ ಬಹಿರಂಗಗೊಂಡಿದೆ.

ಹಲವರು ಹೆಸರು ಪ್ರಸ್ತಾಪ
ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಸ್ಥಾನಕ್ಕೆ ಹಲವು ಜನರ ಹೆಸರು ಮುಂಚೂಣಿಯಲ್ಲಿದ್ದವು. ಹನುಮಂತ ನಿರಾಣಿ, ರಾಮಣ್ಣ ತಳೇವಾಡ, ಆನಂದ ನ್ಯಾಮಗೌಡ ಸೇರಿದಂತೆ ಅನೇಕರ ಹೆಸರು ಪ್ರಸ್ತಾಪವಾಗಿದ್ದವು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆಯಿಂದಾಗಿ ಕೆಲವು ನಿರ್ದೇಶಕರು ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಇನ್ನು ಒಂದು ಹಂತದಲ್ಲಿ ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಇರಿಸುಮುರಿಸು ಉಂಟಾಗಿ ಸಹಕಾರ ಮಾಡುವ ಸ್ಥಿತಿ ಇರಲಿಲ್ಲ. ಇದರಿಂದ ನಿರ್ದೇಶಕ ಮಂಡಳಿಯಲ್ಲಿಯೇ ಕಠಿಣ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಕೊನೆಗೆ ಸರ್ವಾನುಮತದಿಂದ ಸಿದ್ದು ಸವದಿ ಅವರನ್ನು ಆಯ್ಕೆ ಮಾಡಲಾಯಿತು.

ಅಪೇಕ್ಸ್ ಬ್ಯಾಂಕ್ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸದಸ್ಯತ್ವ ರಾಜ್ಯ ಸಂಸ್ಥೆ. ಜಿಲ್ಲಾ ಬ್ಯಾಂಕ್‌ಗಳು ಸಂಗ್ರಹಿಸುವ ಠೇವಣಿಯಲ್ಲಿ ಶೇ.30 ಹಣವನ್ನು ಅಪೇಕ್ಸ್ ಬ್ಯಾಂಕ್‌ನಲ್ಲಿ ಮೀಸಲು ಇಡಲಾಗುತ್ತದೆ. ಅಪೇಕ್ಸ್ ಬ್ಯಾಂಕ್ ತನ್ನ ಮೂಲ ನಿಧಿ ಹಾಗೂ ನಬಾರ್ಡ್ ನೀಡುವ ಹಣವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ಅಲ್ಲದೆ, ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ದೇಶಕ ಸ್ಥಾನ ಅವಕಾಶ ನೀಡುತ್ತದೆ. ಈ ಕಾರಣದಿಂದ ಡಿಸಿಸಿ ಬ್ಯಾಂಕ್‌ನಿಂದ ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಸ್ಥಾನ ತುಂಬಾ ಮಹತ್ವ ಪಡೆದಿದೆ.

ಸಭೆಯಲ್ಲಿ ನಾಯಕರ ಜಟಾಪಟಿ
ಮೊದಲ ಸಭೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಿಜೆಪಿ ನಾಯಕ, ನಿರ್ದೇಶಕರಾದ ರಾಮಣ್ಣ ತಳೇವಾಡ, ಶಿವನಗೌಡ ಅಗಸಿಮುಂದಿನ ನಡುವೆ ತೀವ್ರ ಜಟಾಪಟಿ ನಡೆದಿದೆ. ಏಕವಚನದಲ್ಲಿ ಪದಪ್ರಯೋಗವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಜಯಾನಂದ ಕಾಶಪ್ಪನವರ, ಡಿಸಿಸಿ ಬ್ಯಾಂಕ್‌ನಲ್ಲಿ ಏನೇನು ನಡೆದಿದೆ ಎಲ್ಲವು ಗೊತ್ತಿದೆ. ಕೋಟ್ಯಂತರ ರೂ. ಅವ್ಯವಹಾರ ಆಗಿದೆ. ಜಿಲ್ಲೆಯ ಒಂದೇ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ಇಂದು ದುಸ್ಥಿತಿಗೆ ಬಂದಿದೆ ಎಂದರೆ ಯಾವ ಮಟ್ಟಿಗೆ ಭ್ರಷ್ಟಾಚಾರ ನಡೆದಿದೆ, ಡಿಸಿಸಿಯಿಂದ ಸಾಲ ಪಡೆದು ಹಳೇ ಯಂತ್ರ ಅಳವಡಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಗುಡುಗಿದ್ದಾರೆ. ಇದರಿಂದ ಮೊದಲ ಸಭೆಯಲ್ಲಿ ಕೆಲ ಕಾಲ ಗಂಭೀರ ಸ್ವರೂಪದ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಹಿರಿಯರ ವಿನಂತಿ ಮೇರೆಗೆ ಸಭೆಯ ವಾತಾವರಣ ತಿಳಿಕೊಂಡಿತು.

ಶಾಸಕ ಸಿದ್ದು ಸವದಿ ಅವರನ್ನು ರಾಜ್ಯ ಸಹಕಾರ ಅಪೇಕ್ಸ್ ಬ್ಯಾಂಕ್‌ಗೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಯಾರು ವಿರೋಧ ವ್ಯಕ್ತಪಡಿಸಿಲ್ಲ. ಸಭೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗಿರುವುದು ನಿಜ. ಆದರೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಸಹಕಾರಿ ರಂಗ ಪಕ್ಷಾತೀತ, ಜಾತ್ಯತೀತವಾಗಿದೆ.
-ಅಜಯಕುಮಾರ ಸರನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಸಭೆಯಲ್ಲಿ ನಿರ್ದೇಶಕರಾದ ರಾಮಣ್ಣ ತಳೇವಾಡ, ಶಿವನಗೌಡ ಅಗಸಿಮುಂದಿನ ಏಕವಚನದಲ್ಲಿ ಪದ ಪ್ರಯೋಗ ಮಾಡಿದರು. ಹೀಗಾಗಿ ನಾನು ತಕ್ಕ ಉತ್ತರ ಕೊಡಬೇಕಾಯಿತು. ಡಿಸಿಸಿ ಬ್ಯಾಂಕ್ ವಿಷಯದಲ್ಲಿ ನಾನು ಸತ್ಯದ ಪರವಾಗಿ ಹೋರಾಟ ಮಾಡುತ್ತೇನೆ. ಇದರಲ್ಲಿ ಅನುಮಾನ ಬೇಡ.
- ವಿಜಯಾನಂದ ಕಾಶಪ್ಪನವರ ಡಿಸಿಸಿ ಬ್ಯಾಂಕ್ ನಿರ್ದೇಶಕ, ಮಾಜಿ ಶಾಸಕ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net