

ಬಾಗಲಕೋಟೆ: ಕೇಂದ್ರ, ರಾಜ್ಯ ಸರ್ಕಾರ ಕಾರ್ಮಿಕ, ರೈತ ವಿರೋಧಿ ನೀತಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಯುನೈಟೇಡ್ ಯೂನಿಯುನ್(ಎಐಯುಟಿಯುಸಿ) ನೇತೃತ್ವದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಜಿಲ್ಲಾಡಳಿತ ಭವನ ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಎಐಯುಟಿಯುಸಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಸರ್ಕಾರಗಳ ಅನೈತಿಕ ಆರ್ಥಿಕ ನೀತಿ, ಬಂಡವಾಳ ಶಾಹಿಗಳ ಪರ ಕಾನೂನು ತಿದ್ದುಪಡಿಯಿಂದ ಕಾರ್ಮಿಕರು ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ. ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ, ಹೊರಗುತ್ತಿಗೆ ನೌಕರರು, ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ನೌಕರರು ಜೀವನ ನಡೆಸಲು ಒದ್ದಾಡುತ್ತಿದ್ದಾರೆ. ಅವೈಜ್ಞಾನಿಕ ಲಾಕ್‌ಡೌನ್‌ನಿಂದ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಭಾರತಿ ನಾಡಗೌಡ, ರೇಣುಕಾ ಬೆನಕೊಪ್ಪ, ದ್ಯಾಮಣ್ಣ ಬಿರಾದಾರ, ನಾಗಪ್ಪ ಪೂಜಾರಿ, ದುರ್ಗಪ್ಪ ಹರಿಜನ, ಸುರೇಖಾ ಕಾಳೆ, ನಿಂಗಪ್ಪ ಮೊಕಾಶಿ, ಹನುಮಂತ ಗೌಡರ, ಅಂಬಿಕಾ ಡೊಳ್ಳಿನ ಪ್ರತಿಭಟನೆಯಲ್ಲಿ ಇದ್ದರು.