ಬಿಜೆಪಿಯಿಂದ ಜನ ವಿರೋಧಿ ನೀತಿ

BKT122
Published on

ಬಾಗಲಕೋಟೆ: ಕೇಂದ್ರ, ರಾಜ್ಯ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಗರದ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನವನಗರದ ಎಪಿಎಂಸಿ ವೃತ್ತದಿಂದ ಟ್ರಾೃಕ್ಟರ್, ಖಾಲಿ ಸಿಲಿಂಡರ್‌ನೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಅವೈಜ್ಞಾನಿಕ ನೋಟ್ ಬ್ಯಾನ್, ಜೆಎಸ್‌ಟಿ ಜಾರಿಗೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿದ್ದ ಲಾಕ್‌ಡೌನ್‌ನಿಂದ ಉದ್ಯಮ, ಉದ್ಯೋಗಿಗಳು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಡವರು, ಕಾರ್ಮಿಕರು, ಸಾಮಾನ್ಯ ವರ್ಗದ ಕುಟುಂಬಗಳು ಜೀವನ ನಡೆಸುವುದು ದುಸ್ತರವಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯುತ್ತಿವೆ ಎಂದು ತೀವ್ರ ಆಕ್ರೋಶ ಹೊರ ಹಾಕಿದರು.
ಕೇಂದ್ರ, ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಎಪಿಎಂಸಿ, ಭೂ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಮೇಲೆ ಹಾಕಿದ ಪ್ರಕರಣ ವಾಪಸ್ ಪಡೆಯಬೇಕು. ರಾಷ್ಟ್ರೀಯ ಭದ್ರತೆ ಉಲ್ಲಂಘನೆ ವಿರುದ್ಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಚ್.ವೈ.ಮೇಟಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ನಾಗರಾಜ ಹದ್ಲಿ, ಗಿರೀಶ ಅಂಕಲಗಿ, ಹಾಜಿಸಾಬ ದಂಡಿನ, ಮುತ್ತು ಜೋಳದ, ಶಂಭು ಅಕ್ಕಿಮರಡಿ, ಈರಣ್ಣ ಅಥಣಿ, ರಾಜು ಮನ್ನಿಕೇರಿ, ಪ್ರೇಮನಾಥ ಗರಸಂಗಿ, ಜಿ.ಎಂ.ಸಿಂಧೂರ, ಎಸ್.ಎನ್.ರಾಂಪುರ, ಚನ್ನವೀರ ಅಂಗಡಿ, ಭೀರಣ್ಣವರ, ಈರಣ್ಣ ಹುಂಡೇಕಾರ ಪ್ರತಿಭಟನೆಯಲ್ಲಿ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net