ಹುಲಿಗುಂದಿರಾಯನಕೆರೆಗೆ ಬಾಗೀನ ಅರ್ಪಣೆ

19 ckm 6
ಚಿಕ್ಕಮಗಳೂರು ತಾಲೂಕು ಇಂದಾವರ ಸಮೀಪದ ಹುಲಿಗುಂದಿರಾಯನ ಕೆರೆ ಪುನರ್ವಸು ಮಳೆಯ ಅರ್ಭಟದಿಂದಾಗಿ ಕೋಡಿ ಬಿದ್ದು ಹರಿಯಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಂದಾವರ ಗ್ರಾಪಂ ಅಧ್ಯಕ್ಷ ಐ.ಡಿ.ಚಂದ್ರಶೇಖರ್ ನೇತೃತ್ವದಲ್ಲಿ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಕೆರೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು. ಕೆಂಚಯ್ಯ, ಜ್ಯೋತಿ ಯೋಗೀಶ್, ನೇತ್ರಾವತಿ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಪುರಾತನ ಇತಿಹಾಸವುಳ್ಳ ಇಂದಾವರ ಸಮೀಪದ ಹುಲಿಗುಂದಿರಾಯನ ಕೆರೆ ಪುನರ್ವಸು ಮಳೆಯ ಅರ್ಭಟದಿಂದಾಗಿ ಕೋಡಿ ಬಿದ್ದು ಹರಿಯಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಂದಾವರ ಗ್ರಾಪಂ ಅಧ್ಯಕ್ಷ ಐ.ಡಿ.ಚಂದ್ರಶೇಖರ್ ನೇತೃತ್ವದಲ್ಲಿ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಕೆರೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಐ.ಡಿ.ಚಂದ್ರಶೇಖರ್, ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆ ಇದಾಗಿದೆ. ಅನೇಕ ರೈತಾಪಿ ವರ್ಗಕ್ಕೆ ಜೀವನಾಡಿಯಾಗಿರುವ ಕೆರೆ ಎಂತಹ ಬರಗಾಲದ ಸ್ಥಿತಿಯಲ್ಲೂ ಬತ್ತದಿರುವುದು ವಿಶೇಷ ಎಂದು ಹೇಳಿದರು.
ಇಂದಾವರ, ನೆಲ್ಲೂರು, ಎರೆಹಳ್ಳಿ, ಕಲ್ಲದೇವರಹಳ್ಳಿ, ಹುಕ್ಕುಂದ ಗ್ರಾಮದ ರೈತರು ತರಕಾರಿ, ಭತ್ತ, ಅಡಕೆ ಬೆಳೆಗಳಿಗೆ ಹುಲಿಗುಂದಿರಾಯನಕೆರೆ ಆಸರೆಯಾಗಿದೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಪೂರ್ವಜರ ಕಾಲದಲ್ಲಿ ನಿರ್ಮಿಸಿದ ಈ ಕೆರೆಯು ಗ್ರಾಮಸ್ಥರ ಜೀವನ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ತಾಲೂಕಿನಾದ್ಯಂತ ಈ ಸಾಲಿನಲ್ಲಿ ಪುನರ್ವಸು ಮಳೆಗೆ ಇಂದಾವರ ಕೆರೆ ಕೋಡಿ ಬಿದ್ದಿರುವುದು ಮೊದಲಾಗಿದೆ. ರೈತರ ಬೆಳೆಗಳಿಗೆ ಸಮರ್ಪಕ ನೀರು ಲಭ್ಯವಾಗುವ ಜೊತೆಗೆ ಎರಡು ಚಾನಲ್‌ಗಳ ಮುಖಾಂತರ ಹರಿಯುವ ನೀರು ಉಪ್ಪಳ್ಳಿ ಹಾಗೂ ನೆಲ್ಲೂರು ಮಾರ್ಗದಲ್ಲಿ ಸಾಗಲಿದೆ ಎಂದು ತಿಳಿಸಿದರು.
ಸುತ್ತಮುತ್ತಲು ಹಚ್ಚಹಸಿರಿನಿಂದ ಕೂಡಿರುವ ಕೆರೆಗೆ ಪ್ರವಾಸಿಗರು ಆಗಮಿಸಿ ಪೋಟೋ ಕಿಕ್ಲಿಸುವ ಆಕರ್ಷಿತ ತಾಣವಾಗಿದೆ. ಸುತ್ತಲು ಹಬ್ಬಿಕೊಂಡಿರುವ ಕಾಫಿ ತೋಟಗಳು ಕೆರೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿ ನೋಡುಗರ ಕಣ್ಮನ ಸೆಳೆಯುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಜಗದೀಶ್ ಮಾತನಾಡಿ, ಕೋಡಿಬಿದ್ದಿರುವ ಕೆರೆಯ ನೀರು ರೈತರ ಬೆಳೆಗಳಿಗೆ ಜೀವನಾಡಿಯಾಗಿದೆ. ಅಲ್ಲದೇ ಕೋಡಿ ನೀರು ಚಾನಲ್‌ಗಳ ಮೂಲಕ ಬೇಲೂರು ಡ್ಯಾಂ ಸೇರಿ ತದನಂತರ ಕಾವೇರಿಗೆ ತಲುಪುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಕೆಂಚಯ್ಯ, ಜ್ಯೋತಿ ಯೋಗೀಶ್, ನೇತ್ರಾವತಿ, ಗ್ರಾಮಸ್ಥರಾದ ಐ.ವಿ.ಚೇತನ್, ಐ.ಇ.ಸ್ವಾಮಿ, ಐ.ಕೆ.ನಾಗೇಶ್, ಪಿಡಿಓ ಸುರೈಯಾಭಾನು, ಕಾರ್ಯದರ್ಶಿ ಶೇಖರ್, ಬಿಲ್‌ಕಲೆಕ್ಟರ್ ಉಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net