

ಬೆಂಗಳೂರು: ಮನೆ, ಅಪಾರ್ಟ್ವೆುಂಟ್ ಸೇರಿ ವಸತಿ ಪ್ರದೇಶದಿಂದ ಸಂಸ್ಕರಿಸದ ತ್ಯಾಜ್ಯ ನೀರನ್ನು ನೇರವಾಗಿ ರಾಜಕಾಲುವೆೆ, ಕೆರೆಗೆ ಹರಿಸುವಂತಿಲ್ಲ ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶದ ಅನ್ವಯ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಪಾರ್ಟ್ವೆುಂಟ್ಗಳಿಗೆ ವಿಧಿಸುತ್ತಿರುವ ದಂಡದ ವಿಚಾರ ಹೈಕೋರ್ಟ್ ಮೆಟ್ಟಿಲೇರುತ್ತಿವೆ.
ತ್ಯಾಜ್ಯ ನೀರನ್ನು ಸಂಸ್ಕರಿಸದೆ ರಾಜಕಾಲುವೆ/ಕೆರೆಗೆ ಹರಿಸಲಾಗುತ್ತಿದೆ ಎಂಬ ಆರೋಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 250ಕ್ಕೂ ಹೆಚ್ಚು ಮನೆ ಹಾಗೂ ಅಪಾರ್ಟ್ವೆುಂಟ್ಗಳಿಗೆ ದಂಡ ವಿಧಿಸಿದೆ. ಆದರೆ, ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ಮಂಡಳಿ ಸೂಕ್ತ ನಿಯಮ ಪಾಲಿಸುತ್ತಿಲ್ಲ ಎಂದು ದೂರುತ್ತಿರುವ ಅಪಾರ್ಟ್ವೆುಂಟ್ ನಿವಾಸಿಗಳು ದಂಡದ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ.
ಎಸ್ಟಿಪಿ ಅಳವಡಿಸದಿದ್ದರೆ ಜುಲ್ಮಾನೆ: ತ್ಯಾಜ್ಯ ನೀರನ್ನು ಸಂಸ್ಕರಿಸಲು ಅಪಾರ್ಟ್ವೆುಂಟ್ಗಳು ಕಡ್ಡಾಯವಾಗಿ ಸಂಸ್ಕರಣಾ ಘಟಕ (ಎಸ್ಟಿಪಿ) ಅಳವಡಿಸಿಕೊಳ್ಳಬೇಕು. ಅದರಲ್ಲೂ 50ಕ್ಕೂ ಹೆಚ್ಚು ಫ್ಲ್ಯಾಟ್ಗಳಿರುವ ಅಪಾರ್ಟ್ವೆುಂಟ್ಗಳಿಗೆ ಈ ನಿಯಮ ಕಡ್ಡಾಯವಾಗಿ ಅನ್ವಯಿಸುತ್ತದೆ.
ದಂಡ ಪಾವತಿಸದಿದ್ದರೆ ನೀರು, ಕರೆಂಟಿಲ್ಲ: ಬೆಳ್ಳಂದೂರು ಕೆರೆಗೆ ಕೈಗಾರಿಕೆಗಳ ರಾಸಾಯನಿಕಯುಕ್ತ ತ್ಯಾಜ್ಯ ಅಲ್ಲದೆ ಮನೆಗಳ ತ್ಯಾಜ್ಯ ನೀರನ್ನು ನೇರವಾಗಿ ಹರಿಸಲಾಗುತ್ತಿದೆ. ಇದರಿಂದಾಗಿ ಕೆರೆಯಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಪಾರ್ಟ್ವೆುಂಟ್ಗಳಿಗೆ ಎಸ್ಟಿಪಿ ಅಳವಡಿಕೆಯನ್ನು ಎನ್ಜಿಟಿ ಕಡ್ಡಾಯಗೊಳಿಸಿತ್ತು. ಈ ನಿಯಮ ಪಾಲಿಸದ ವೈಟ್ಫೀಲ್ಡ್, ಮಾರತ್ತಹಳ್ಳಿ, ಎಚ್.ಎಸ್.ಆರ್. ಲೇಔಟ್ ಮತ್ತಿತರ ಬಡಾವಣೆಗಳ ಅಪಾರ್ಟ್ವೆುಂಟ್ಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜುಲ್ಮಾನೆ ವಿಧಿಸಿದ್ದರು. ಎಸ್ಟಿಪಿ ಅಳವಡಿಸಿದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಅಪಾರ್ಟ್ ಮೆಂಟ್ಗಳಿಗೆ ಕನಿಷ್ಠ 5 ಲಕ್ಷ ರೂ. ಹಾಗೂ ಎಸ್ಟಿಪಿಯನ್ನೇ ಅಳವಡಿಸದ ಅಪಾರ್ಟ್ವೆುಂಟ್ಗಳಿಗೆ ಗರಿಷ್ಠ 3 ಕೋಟಿ ರೂ.ವರೆಗೆ ದಂಡ ವಿಧಿಸಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಅಪಾರ್ಟ್ವೆುಂಟ್ಗಳ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ತಡೆಯಾಜ್ಞೆ ಪರಿಶೀಲನೆ: ನೋಟಿಸ್ಗೆ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು, ಈ ಬಗ್ಗೆ ಪರಿಶೀಲಿಸಲಾಗುತ್ತದೆ. ನೋಟಿಸ್ ಪಡೆದಿರುವವರು ದಂಡ ಪಾವತಿಸಬೇಕು ಇಲ್ಲವೇ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತರದೆ, ದಂಡವನ್ನೂ ಪಾವತಿಸದಿದ್ದರೆ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತ್ಯಾಜ್ಯ ನೀರಿನ ಮಾದರಿ ಸಂಗ್ರಹದಲ್ಲಿ ಮಾರ್ಗಸೂಚಿ ಪಾಲಿಸದ ಆರೋಪ
ದಂಡದ ಮೊತ್ತ ದುಬಾರಿ ಎಂಬುದು ಒಂದೆಡೆಯಾದರೆ, ನೋಟಿಸ್ ನೀಡುವಾಗ ಸೂಕ್ತ ಮಾರ್ಗಸೂಚಿ ಪಾಲಿಸಿಲ್ಲ ಎಂಬುದು ಅಪಾರ್ಟ್ವೆುಂಟ್ ನಿವಾಸಿಗಳ ಆರೋಪವಾಗಿದೆ. ಜಲ ಕಾಯ್ದೆ ಪ್ರಕಾರ, ಪರೀಕ್ಷೆಗೆ ತ್ಯಾಜ್ಯ ನೀರಿನ ಮಾದರಿ ಸಂಗ್ರಹಿಸುವ ಮುನ್ನ ಮಾಲೀಕರಿಗೆ ಮಾಹಿತಿ ನೀಡಬೇಕು. ಎರಡು ಪ್ರತ್ಯೇಕ ಮಾದರಿ ಸಂಗ್ರಹಿಸಿ ಮಾಲೀಕರು ಹಾಗೂ ಅಧಿಕಾರಿಗಳು ಸಹಿ ಪಡೆಯಬೇಕು. ಒಂದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾನ್ಯತೆಯುಳ್ಳ ಪ್ರಯೋಗಾಲಯಕ್ಕೆ, ಮತ್ತೊಂದನ್ನು ರಾಜ್ಯದ ಯಾವುದೇ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಆದರೆ ಅಪಾರ್ಟ್ ಮೆಂಟ್ಗಳಿಂದ ತ್ಯಾಜ್ಯ ನೀರಿನ ಮಾದರಿ ಸಂಗ್ರಹಿಸುವಾಗ ಈ ಮಾರ್ಗಸೂಚಿ ಪಾಲಿಸಿಲ್ಲ. ಯಾವ ಸಮಯದಲ್ಲಿ ಮಾದರಿ ತೆಗೆದುಕೊಂಡು ಹೋಗಿದ್ದಾರೆ ಎಂಬುದೇ ಗೊತ್ತಿಲ್ಲ. ಒಂದು ವೇಳೆ ಎಸ್ಟಿಪಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ನೋಟಿಸ್ ನೀಡಿ ದುರಸ್ತಿಗೊಳಿಸಲು ಸೂಚಿಸಬೇಕು. ಅದನ್ನು ಬಿಟ್ಟು ಏಕಾಏಕಿ 5 ಲಕ್ಷ ರೂ. ದಂಡ ವಿಧಿಸುವುದು ಸರಿಯಲ್ಲ ಎಂದು ಬೆಂಗಳೂರು
ಅಪಾರ್ಟ್ವೆುಂಟ್ಸ್ ಅಸೋಸಿಯೇಷನ್ (ಬಿಎಎಫ್) ಅಧ್ಯಕ್ಷ ನಾಗರಾಜ್ ರಾವ್ ಹೇಳಿದ್ದಾರೆ. 50 ಫ್ಲ್ಯಾಟ್ಗಳಿರಲಿ, 500 ಫ್ಲ್ಯಾಟ್ಗಳೇ ಇರಲಿ, ಎಲ್ಲರಿಗೂ ಒಂದೇ ರೀತಿ ದಂಡ ವಿಧಿಸುವುದೂ ಸರಿಯಲ್ಲ. ನಿಯಮ ಉಲ್ಲಂಘನೆ ಪ್ರಮಾಣಕ್ಕೆ ತಕ್ಕಂತೆ ದಂಡ ವಿಧಿಸಲಿ ಎಂದು ಪ್ರತಿಪಾದಿಸಿದ್ದಾರೆ. ಈಗಾಗಲೆ ಅನೇಕ ಅಪಾರ್ಟ್ ಮೆಂಟ್ಗಳ ನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. 15ಕ್ಕೂ ಹೆಚ್ಚು ನೋಟಿಸ್ಗಳಿಗೆ ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ.