ಬ್ಯಾಡ್ಮಿಂಟನ್: ವಿವಿಸಿಇ ಕಾಲೇಜು, ಜಿಎಸ್‌ಎಸ್‌ಎಸ್ ಮಹಿಳಾ ಕಾಲೇಜು ಚಾಂಪಿಯನ್

mysore
Published on

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಮೈಸೂರು ವಿಭಾಗದ ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ(ವಿವಿಸಿಇ) ತಂಡವು ಮುಡಿಗೇರಿಸಿಕೊಂಡಿದೆ. ಮಹಿಳಾ ವಿಭಾಗದಲ್ಲಿ ಜಿಎಸ್‌ಎಸ್‌ಎಸ್ ಮಹಿಳಾ ಬಿಇ ಕಾಲೇಜಿನ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.


ನಗರದ ಎನ್‌ಐಇ ಕಾಲೇಜಿನ ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಅಯೋಜಿಸಿದ್ದ ಟೂರ್ನಿಯಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳ ತಾಂತ್ರಿಕ ಕಾಲೇಜುಗಳ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿದ್ದವು.


ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ತಂಡವನ್ನು 3-1 ಸೆಟ್‌ನೊಂದಿಗೆ ಸೋಲಿಸಿ ವಿವಿಸಿಇ ತಂಡವು ಜಯಶಾಲಿಯಾಯಿತು.

ಸೆಮಿಫೈನಲ್‌ನಲ್ಲಿ ಈ ತಂಡವು ಆತಿಥ್ಯ ವಹಿಸಿದ್ದ ಎನ್‌ಐಇ ಕಾಲೇಜಿನ ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.
ಮಹಿಳಾ ವಿಭಾಗದಲ್ಲಿ ವಿವಿಸಿಇ ತಂಡವನ್ನು 2-0 ನೇರ ಸೆಟ್‌ಗಳ ಮೂಲಕ ಜಿಎಸ್‌ಎಸ್‌ಎಸ್ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಸೆಮಿಫೈನಲ್‌ನಲ್ಲಿ ಮಂಡ್ಯದ ಪಿಇಎಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು.

ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಡಾ.ಹರ್ಷ ವಿಮನ್ ಟೂರ್ನಿಗೆ ಚಾಲನೆ ನೀಡಿ ಶುಭ ಹಾರೈಸಿದರು. ವಿಟಿಯು ಮೈಸೂರು ವಲಯದ ದೈಹಿಕ ಶಿಕ್ಷಣ ಪ್ರಾದೇಶಿಕ ನಿರ್ದೇಶಕ ಡಾ.ಎಂ.ಪಿ.ಮುರುಳೀಧರ್, ಕಾಲೇಜಿನ ಉಪಪ್ರಾಂಶುಪಾಲ ಡಾ.ಎಂ.ಎಸ್.ಗಣೇಶ್‌ಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕರಾದ ಆರ್.ಕಾವ್ಯಾ, ಎಚ್.ಸಿ.ಸುದಿನ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net