

ಶಿರಾ : ಭದ್ರಾ ಮೇಲ್ದಂಡೆ ಯೋಜನೆಗೆ 21 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಶೇ.80 ಕಾರ್ಯ ಮುಗಿದಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ತಾಲೂಕು ಕಚೇರಿಯ ಮಿನಿ ವಿಧಾನಸೌಧದ ಆವರಣದಲ್ಲಿ ಸೋಮವಾರ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು. ಈ ಯೋಜನೆಗೆ ಆಂಧ್ರಪ್ರದೇಶದ ಆಕ್ಷೇಪಣೆ ಇದ್ದು, ಮಂಗಳವಾರ ನಡೆಯುವ ಸಭೆಯಲ್ಲಿ ಇದನ್ನು ತಿರಸ್ಕರಿಸಲಾಗುವುದು ಎಂದರು.
2017 ರಿಂದ ಶಿರಾ ತಾಲೂಕಿನಲ್ಲಿ ಕೇವಲ 300 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿತ್ತು. ಬಿಜೆಪಿ ಕಾರ್ಯಾವಧಿಯಲ್ಲಿ 621 ಹಕ್ಕುಪತ್ರ ವಿತರಿಸಲಾಗುತ್ತಿದೆ. ಮೊದಲೆಲ್ಲಾ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್‌ನಿಂದ ಸಬ್ ರಿಜಿಸ್ಟರ್ ಮೂಲಕ ಹಕ್ಕು ಪತ್ರ ಪಡೆಯಬೇಕಾಗಿತ್ತು. ಆದರೆ, ಈಗ ವಿಧಾನವನ್ನು ಸರಳೀಕರಿಸಲಾಗಿದೆ, ಬಿಜೆಪಿ ಯಾವತ್ತು ಕೊಟ್ಟ ಮಾತಿಗೆ ತಪ್ಪಲ್ಲ ಮದಲೂರು ಕೆರೆಗೆ ನೀರು ಹರಿಸಿದ್ದೇವೆ ಎಂದರು.
ಕೆಎಎಸ್, ಐಪಿಎಸ್, ಐಎಎಸ್ ಸ್ಥಾನಕ್ಕೆ ಜನರು ಬೆಲೆ ಕೊಡುತ್ತಿದ್ದರು. ಆದರೆ, ಈಗ ಅವರು ನಿರ್ವಹಿಸುವ ಒಳ್ಳೆಯ ಕೆಲಸ ಕಾರ್ಯಗಳಿಂದ ಅವರಿಗೆ ಬೆಲೆ ಕೊಡುತ್ತಾರೆ. ಶಿರಾ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸಗಳು ವಿಳಂಬವಾಗುತ್ತಿದೆ ಎಂಬ ದೂರಿದೆ. ಸಾರ್ವಜನಿಕರಿಗೆ ಸ್ಪಂದಿಸಿದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೆಲೆ ಎಂದು ಮಾರ್ಮಿಕವಾಗಿ ಹೇಳಿದರು.
ಗ್ರಾಮ ಒನ್ ಕಾರ್ಯಕ್ರಮದಡಿಯಲ್ಲಿ ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಮಸ್ಥರಿಗೆ ಒದಗಿಸಲಾಗಿದೆ. ಈ ಹಿಂದೆ ಸರ್ಕಾರಿ ಕೆಲಸಕ್ಕೆ ಅಲೆದಾಡುವ ಪರಿಸ್ಥಿತಿ ಇತ್ತು. ಈಗ ಅವರ ಗ್ರಾಮಗಳಿಗೆ ಭೇಟಿ ನೀಡಿ ಸೌಲಭ್ಯವನ್ನು ತಲುಪಿಸುವ ವ್ಯವಸ್ಥೆ ಯಾಗಿದೆ. ಇ ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್‌ಭವ ಕಾರ್ಡ್‌ಗಳನ್ನು ವಿತರಿಸುವ ಮೂಲಕ ನಮ್ಮ ಸರ್ಕಾರ ಬಡವ ಹಾಗೂ ರೈತರ ಪರವಾಗಿದೆ ಎಂದು ಶಾಸಕ ಡಾ.ಸಿ.ಎಂ. ರಾಜೇಶ್‌ಗೌಡ ತಿಳಿಸಿದರು.
ರಾಜ್ಯ ನಾರು ನಿಗಮ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ನಿಗಮ-ಮಂಡಳಿ ಅಧ್ಯಕ್ಷ ಎಸ್. ಆರ್. ಗೌಡ , ತಹಸೀಲ್ದಾರ್ ಮಮತಾ, ತಾಪಂ ಇಒ ಅನಂತರಾಜ್, ನಿಡಘಟ್ಟ ಚಂದ್ರಶೇಖರ್, ಸೂಡಾ ಅಧ್ಯಕ್ಷ ಈರಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ನರಸಿಂಹಮೂರ್ತಿ, ಕೋಟೆ ರವಿ, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.