

ಬ್ಯಾಡಗಿ: ಲೋಕೋಪಯೋಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಖ್ಯರಸ್ತೆ ವಿಸ್ತರಣೆ ಕಾರ್ಯ ತೀವ್ರ ವಿಳಂಬವಾಗುತ್ತಿದೆ. ಹೋರಾಟಗಾರರು ನೀಡಿದ 6 ತಿಂಗಳ ಗಡುವು ಮುಗಿದಿದ್ದು, ಆ. 15ರ ಸ್ವಾತಂತ್ರೋತ್ಸವ ದಿನದಂದು ಶಾಶ್ವತವಾಗಿ ರಸ್ತೆ ಬಂದ್ ಮಾಡುವ ಮೂಲಕ ದೊಡ್ಡ ಚಳವಳಿ ಆರಂಭಿಸುತ್ತೇವೆ ಎಂದು ರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ವಿಸ್ತರಣೆ ವಿಳಂಬಕ್ಕೆ ಇಲ್ಲಿ ಕಾರ್ಯನಿರ್ವಹಿಸುವ ಲೋಕೋಪಯೋಗಿ ಇಂಜಿನಿಯರರು ಹಾಗೂ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ಅವರಿಗೆ ಜನಪರ ಕಾಳಜಿಯೇ ಇಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಹೋರಾಟ ಮಾಡಿದ ವೇಳೆ ಸಂಸದರು, ಉಸ್ತುವಾರಿ ಸಚಿವರಿಂದ ಹಿಡಿದು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಸುಳ್ಳು ಭರವಸೆ ನೀಡಿದ್ದಾರೆ. ಈವರೆಗೂ ಸ್ಥಳೀಯ ನಾಗರಿಕರಿಗೆ ನ್ಯಾಯ ದೊರಕಿಲ್ಲ. ಜನರು ನಿತ್ಯ ನರಕಯಾತನೆಯಲ್ಲಿ ಕಾಲ ಕಳೆಯುತ್ತಿದ್ದು, ರಸ್ತೆಗಳು ಕೆಸರಿನ ಗದ್ದೆಯಂತಾಗಿವೆ. ಆದರೆ, ಲೋಕೋಪಯೋಗಿ ಅಧಿಕಾರಿಗಳು ‘ನಮ್ಮದೇನೂ ತಪ್ಪಿಲ್ಲ. ಎಲ್ಲ ದಾಖಲೆ ಸಲ್ಲಿಸಿದ್ದೇವೆ’ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದು ಸರಿ..? ಯಾರು ತಪ್ಪಿತಸ್ಥರು ಎಂಬುದು ತಿಳಿಯದಂತಾಗಿದೆ. ಹೀಗಾಗಿ ಅಧಿಕಾರಿಗಳ ಹೇಳಿಕೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಆ. 15ರಂದು ರಸ್ತೆ ಬಂದ್ ಮಾಡಿ ಹೋರಾಟ ಆರಂಭಿಸುತ್ತೇವೆ. ಬ್ಯಾಡಗಿ ಮುಖ್ಯರಸ್ತೆಯಲ್ಲಿ ಓಡಾಡುವ ಜನರಿಗೆ ಸ್ವಾತಂತ್ರ್ಯ ಕೊಡಿ ಎಂದು ಆಗ್ರಹ ಮಾಡುತ್ತೇವೆ ಎಂದರು.
ಅಂಗವಿಕಲರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಮಾತನಾಡಿ, ಪಿಡಬ್ಲ್ಯುಡಿ ಎಇಇ ಉಮೇಶ ನಾಯಕ ಅವರು ರಸ್ತೆ ವಿಸ್ತರಣೆ ಕುರಿತಂತೆ ಯಾವುದೇ ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ವಿಸ್ತರಣೆಯ ಯಾವುದೇ ಪ್ರಕ್ರಿಯೆಯನ್ನು ಇಲ್ಲಿಯವರೆಗೂ ಸರಿಯಾಗಿ ಮಾಡದೇ ಜನರ ಹಾಗೂ ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಅಸಾಧ್ಯ. ರಸ್ತೆ ವಿಸ್ತರಣೆ ವಿರೋಧಿ ವ್ಯಕ್ತಿಗಳ ಜತೆ ಕೈಜೋಡಿಸುವ ಮೂಲಕ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿದ್ದಾರೆ. ಅವರನ್ನು ವರ್ಗಾವಣೆ ಮಾಡದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ. ಸ್ಥಳೀಯ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ರಸ್ತೆ ವಿಸ್ತರಣೆ ಹೋರಾಟ ಸಮಿತಿ ಸದಸ್ಯ ಕಿರಣಕುಮಾರ ಎಂ.ಎಲ್. ಮಾತನಾಡಿ, ಮುಖ್ಯರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಒಂದು ವರ್ಷದ ಒಳಗೆ ಅಂತಿಮ ಹಂತದ ಅಧಿಸೂಚನೆ ಹೊರಡಿಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಅವಧಿ ವಿಸ್ತರಣೆಗೆ ಮತ್ತೆ ಕಾಲಾವಕಾಶ ಕೋರಬೇಕು. ಆದರೆ ಪಿಡಬ್ಲ್ಯುಡಿ ಅಧಿಕಾರಿಗಳು ಈ ಕಾರ್ಯ ಮಾಡದೆ, 7 ತಿಂಗಳ ಕಾಲಹರಣ ಮಾಡಿರುವುದು ಅವಾಂತರಕ್ಕೆ ಕಾರಣವಾಗಿದೆ. ಒಟ್ಟಾರೆ ಅಧಿಕಾರಿಗಳೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯೆ ಫರೀದಾಬಾನು ನದಿಮುಲ್ಲಾ, ಗುಡ್ಡಪ್ಪ ಆಡಿನವರ, ಜಯಣ್ಣ ಹುಣಸಿಮರದ, ಎಂ.ಎಲ್. ರೇಖಾ ಇದ್ದರು.