

ಆರ್.ಕೃಷ್ಣ ಮೈಸೂರು
ನಂಜನಗೂಡು ತಾಲೂಕು ಬದನವಾಳು ಗ್ರಾಮದಲ್ಲಿನ ಆ ಒಂದು ಘಟನೆ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸಮುದಾಯದ ನಾಯಕರಾಗಿ ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿತು.
ಗ್ರಾಮದಲ್ಲಿ 1993ರಲ್ಲಿ ದಲಿತ ಹಾಗೂ ಲಿಂಗಾಯತ ಸಮುದಾಯದ ನಡುವೆ ನಡೆದ ಗಲಭೆ ಇಡೀ ರಾಜ್ಯವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಸದ್ದು ಮಾಡಿತ್ತು. ಈ ಘಟನೆಯಲ್ಲಿ ಮೂವರು ದಲಿತರು ಕಗ್ಗೊಲೆಯಾಗಿ ಎರಡೂ ಸಮುದಾಯದ ಹಲವರು ಗಾಯಗೊಂಡಿದ್ದರು. ಕೆಲವರು ಮಾಡಿದ ಪ್ರಚೋದನೆ ಇಡೀ ಗ್ರಾಮವೇ ಹೊತ್ತಿ ಉರಿಯುವಂತಾಗಿ ಕೆಲವು ವರ್ಷಗಳ ಕಾಲ ಗ್ರಾಮದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣಗೊಂಡಿತು.
ಇಂತಹ ಸಂದರ್ಭದಲ್ಲಿ ದಲಿತರ ಬೆನ್ನಿಗೆ ನಿಂತ ಶ್ರೀನಿವಾಸಪ್ರಸಾದ್ ಸಮುದಾಯದಲ್ಲಿ ಧೈರ್ಯ ತುಂಬಿದರು. ಇತ್ತ ಪ್ರಭಾವಿಯಾಗಿದ್ದ ಅಂದಿನ ರಾಜಕಾರಣಿಗಳಾದ ರಾಜಶೇಖರಮೂರ್ತಿ, ಎಂ.ಮಹದೇವು ಇತರರು ಲಿಂಗಾಯತ ಸಮುದಾಯಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಿದರು.
ಈ ಘಟನೆ ಸಮುದಾಯದ ಜನರಲ್ಲದೇ ರಾಜಶೇಖರಮೂರ್ತಿ, ಎಂ.ಮಹದೇವು ಹಾಗೂ ವಿ.ಶ್ರೀನಿವಾಸಪ್ರಸಾದ್ ನಡುವೆ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಯಿತು. ಹಲವು ವರ್ಷಗಳ ತನಕ ಬದನವಾಳು ಘಟನೆಯೇ ಚುನಾವಣೆಯ ವಿಷಯವೂ ಅಗಿ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು.
ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನು ಪ್ರತಿರೋಧಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ನಂಜನಗೂಡಿನಲ್ಲಿ ಬಿಜೆಪಿಯಿಂದ ಶ್ರೀನಿವಾಸಪ್ರಸಾದ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಬದನವಾಳು ವಿಷಯ ಮುನ್ನೆಲೆಗೆ ಬಂದಿತು. ಘಟನೆ ನಡೆದು 30 ವರ್ಷ ಕಳೆದರೂ ಇತ್ತೀಚಿನ ವರ್ಷದವರೆವಿಗೂ ಅದೇ ವಿಷಯ ಆಗಾಗ್ಗೆ ಚರ್ಚೆಯೂ ನಡೆಯುತ್ತಿತ್ತು.
ಏನಿದು ಬದನವಾಳು ಘಟನೆ?
ಬದನವಾಳು ಗ್ರಾಮದಲ್ಲಿರುವ ಶ್ರೀಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮದ ಎಲ್ಲರೂ ದೇಣಿಗೆ ನೀಡಬೇಕು ಎನ್ನುವ ಬೇಡಿಕೆ ಇಡಲಾಗಿತ್ತು. ಆದರೆ, ದೇವಸ್ಥಾನದಲ್ಲಿ ಪ್ರವೇಶ ನೀಡದ ಕಾರಣ ದಲಿತರು ದೇಣಿಗೆ ನೀಡಲು ವಿರೋಧಿಸಿದ್ದರು. ದೇವಸ್ಥಾನದೊಳಗೆ ಪ್ರವೇಶ ನೀಡಿದರೆ ಮಾತ್ರ ದೇಣಿಗೆ ನೀಡುವುದಾಗಿ ಷರತ್ತು ಹಾಕಿದ್ದರು. ಆದರೆ ವೀರಶೈವ-ಲಿಂಗಾಯತ ಸಮುದಾಯದವರು ದೇವಸ್ಥಾನದ ಮರು ಉದ್ಘಾಟನಾ ಸಮಾರಂಭದ ಹೊತ್ತಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದರು. ಪ್ರಕರಣ ಗಂಭೀರ ತಿರುವು ಪಡೆದುಕೊಂಡಾಗ ಅಂತಿಮವಾಗಿ ದೇವಸ್ಥಾನಕ್ಕೆ ಬೀಗ ಮುದ್ರೆ ಹಾಕಲಾಯಿತು.
1993ರ ಜ.30ರಲ್ಲಿ ಈ ಸಂಬಂಧ ಶಾಂತಿ ಸಮಿತಿ ರಚಿಸಲಾಗಿತ್ತು. ಆದರಂತೆ 1993 ಫೆ.2ರಂದು ದಲಿತರು ಪೊಲೀಸರ ಸಹಾಯ ಪಡೆದು ದೇವಸ್ಥಾನದ ಬೀಗ ಒಡೆದು ಒಳ ಪ್ರವೇಶಿಸಿದ್ದರು. ಬಳಿಕ ಮಾರ್ಚ್ 26 ರಂದು ದೇವಸ್ಥಾನದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದರ ಸಲುವಾಗಿ ದೇವಸ್ಥಾನದಿಂದ ಒಂದು ಕಿಮೀ ದೂರದಲ್ಲಿ ಪ್ರಾಣಿ ಬಲಿ ಕೊಡಲು ದಲಿತ ಸಮುದಾಯ ನಿರ್ಧರಿಸಿತು.
ಇದರಿಂದ ರೊಚ್ಚಿಗೆದ್ದ ಜನ 1993 ಮಾರ್ಚ್ 25ರಂದು ಸಂಜೆ ಹಣಿಯಂಬಳ್ಳಿ ಹಾಗೂ ಬದನವಾಳುವಿನ ನಡುವೆ ಅಂದು ಕ್ರಿಕೆಟ್ ಪಂದ್ಯ ಮುಗಿಸಿ ವಾಪಸ್ ಆಗುತ್ತಿದ್ದ ದಲಿತ ಸಮುದಾಯದ ಮಧುಕರ್, ನಟರಾಜ್ ಮತ್ತು ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದರಿಂದ ಎರಡು ಸಮುದಾಯದ ನಡುವೆ ದ್ವೇಷ ಬೆಂಕಿಯಾಗಿ ವ್ಯಾಪಿಸಿತು.
ಈ ಘಟನೆಯಲ್ಲಿ ಒಟ್ಟು 23 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಮೂವರು ವಿಚಾರಣೆ ಅವಧಿಯಲ್ಲೇ ಮೃತರಾಗಿದ್ದಾರೆ. ಉಳಿದ 20 ಜನರಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದಾಗ 7 ಜನರು ಖಲಾಸೆಗೊಂಡು ಉಳಿದ 13 ಜನರ ಜೀವಾವಧಿ ಶಿಕ್ಷೆ ಕಾಯಂಗೊಂಡಿತು.
29 ವರ್ಷಗಳ ಬಳಿಕ ಸಹಭೋಜನ
ಬದನವಾಳು ಗ್ರಾಮದಲ್ಲಿ ಉಂಟಾಗಿದ್ದ ದ್ವೇಷದ ಕಿಡಿ ಆರಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಗ್ರಾಮದಲ್ಲಿ 29 ವರ್ಷದ ಬಳಿಕ ವೀರಶೈವ-ಲಿಂಗಾಯತ ಮತ್ತು ದಲಿತ ಸಮುದಾಯದವರಿಗೆ ಸಹಭೋಜನ ಏರ್ಪಡಿಸಲಾಯಿತು. ಅಲ್ಲದೆ ಮುಚ್ಚಿದ್ದ ಸಂಪರ್ಕ ರಸ್ತೆಯನ್ನು ಶ್ರಮದಾನದ ಮೂಲಕ ಮತ್ತೆ ಎರಡು ಸಮುದಾಯದವರಿಗೆ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಯಿತು.
ಗ್ರಾಮದಲ್ಲಿ ನಡೆದ ಘಟನೆಯನ್ನು ಆಧರಿಸಿ ಗಿರಿಕೃಷ್ಣ ಅವರ ನಿರ್ದೇಶನದಲ್ಲಿ ಚಿತ್ರ ನಿರ್ಮಿಸಲು ಮುಹೂರ್ತ ಕೂಡ ನಡೆದಿತ್ತು. ಈಗ ಎರಡೂ ಸಮುದಾಯವು ಇಂತಹ ಘಟನೆ ಮರುಕಳಿಸಬಾರದು ಎನ್ನುವ ನಿರ್ಧಾರಕ್ಕೆ ಬಂದು ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಈ ಒಂದು ಕಹಿ ಘಟನೆ ಇತಿಹಾಸ ಪುಟದಲ್ಲಿ ಸೇರಿಕೊಂಡು ಬಿಟ್ಟಿದೆ.