ಬಾಣಂತಿ ಸೊಸೆ ಮನೆಗೆ ಸೇರಿಸಿಕೊಳ್ಳಲು ಒಪ್ಪಿಗೆ

IMG-20220825-WA0018
Published on

ಉಡುಪಿ :  ಬಾದಾಮಿ ಮೂಲದ ಯುವಕ ಇತ್ತೀಚೆಗೆ ಮರಣ ಹೊಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿ ಸತತ ಪರಿಶ್ರಮ ಫಲವಾಗಿ ಯುವಕನ ಮನೆಯವರು ಸೊಸೆ ಮತ್ತು ಮಗುವಿಗೆ ಆಶ್ರಯ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಉಡುಪಿಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (27) ಎಂಬವರು ಇತ್ತೀಚಿಗೆ ಹಠಾತ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಪ್ರೇಮ ವಿವಾಹವಾಗಿದ್ದ ಕಾರಣ ಮನೆಮಂದಿ ಮೃತದೇಹ ಕೊಂಡೊಯ್ಯಲು ಒಪ್ಪಿದ್ದರೂ, ಸೊಸೆ ಮತ್ತು ಮೊಮ್ಮಗನನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ ಮಹಿಳೆ ಮತ್ತು ಮಗುವನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸಖಿ ಒನ್ ಸ್ಟಾಪ್ ಸೆಂಟರಿಗೆ ದಾಖಲು ಮಾಡಿದ್ದರು.

ಶುಕ್ರವಾರ ಉಡುಪಿಗೆ ಬಂದ  ಅಯ್ಯಪ್ಪ ಅವರ ಮನೆಮಂದಿ ಕಾನೂನು ಪ್ರಕ್ರಿಯೆ ನಡೆಸಿ ಸಂತ್ರಸ್ತೆ ಗೀತಾ ಹಾಗೂ ಆಕೆಯ ೧ ತಿಂಗಳ ಮಗುವನ್ನು ತಮ್ಮ ಜತೆಗೆ ಕರೆದೊಯ್ದಿದ್ದಾರೆ.

ಫಲಿಸಿದ ಸಂಧಾನ
ಪತ್ನಿ ಗೀತಾ ಹಾಗೂ ಆಕೆಯ ಮಗುವನ್ನು ಬಿಟ್ಟು, ಪತಿ ಮನೆಯವರ ಕೋರಿಕೆಯಂತೆ ಅಯ್ಯಪ್ಪ ಅವರ ಮೃತ ದೇಹವನ್ನು ಅವರ ಹುಟ್ಟೂರು ಬಾದಾಮಿಗೆ ಕಳುಹಿಸಲಾಗಿತ್ತು. ಇತ್ತ ಅಗಲಿದ ಗಂಡನ ಅಂತ್ಯಕ್ರಿಯೆಗೂ ಹೋಗಲಾಗದೆ, ಅತ್ತ ತವರು ಮನೆ ಹಾಗೂ ಗಂಡನ ಮನೆಯವರಿಂದ ತಿರಸ್ಕರಿಸಲ್ಪಟ್ಟ ಗೀತಾ  ಅವರಿಗೆ ಸಾಂತ್ವನ ಹೇಳಿದ್ದ  ಸಖಿ ಒನ್ ಸ್ಟಾಫ್ ಸೆಂಟರ್‌ನ ತಂಡ ಗಂಡನ ಕಡೆಯವರೊಂದಿಗೆ ನಿರಂತರ ಮಾತುಕತೆ ನಡೆಸಿ ಕೊನೆಗೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಸ್ಥಳೀಯ ಮುಖಂಡರೊಂದಿಗೆ ಆಗಮಿಸಿದ ಅಯ್ಯಪ್ಪ ಅವರ ಹೆತ್ತವರು, ಗೀತಾ ಹಾಗೂ ಆಕೆಯ ಮಗುವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆಕೆ ಮತ್ತು ಮಗುವಿನ ಮುಂದಿನ ಜವಾಬ್ದಾರಿ ತಾವೇ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗೀತಾ ಇನ್ನೂ ಚಿಕ್ಕ ವಯಸ್ಸಿನವಳಾಗಿರುವುದರಿಂದ ಆಕೆ ಮರು ಮದುವೆಯಾಗಲು ಇಚ್ಚಿಸಿದಲ್ಲಿ ಅದಕ್ಕೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ಉಡುಪಿ ಮಹಿಳಾ ಠಾಣೆಯ ಸಿಬ್ಬಂದಿಯ ಸಮಕ್ಷಮದಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net