ಭಾರಿ ಮಳೆಗೆ ತತ್ತರಿಸಿದ ಬಾದಾಮಿ - ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಅಧಿಕಾರಿಗಳು

Badami
Published on

ಬಾದಾಮಿ: ನಗರ ಸೇರಿ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳೆಯ ಮಣ್ಣಿನ ಮನೆಗಳ ನಿವಾಸಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಪಟ್ಟಣ ಅಗಸ್ತ್ಯತೀರ್ಥ ಹೊಂಡ ಸಂಪೂರ್ಣ ಭರ್ತಿಯಾಗಿ ಅಕ್ಕಪಕ್ಕದ ಬಡಾವಣೆಗಳ ಮನೆಗಳಲ್ಲಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ನಗರದ ಪಶ್ಚಿಮ ದಿಕ್ಕಿನಲ್ಲಿರುವ ಕಲ್ಲಿನ ಅಗಸಿ ಬಾಗಿಲಿನ ಮೂಲಕ ಕೋಡಿ ಹರಿಯುತ್ತಿದೆ. ನಗರದ ಆಶ್ರಯ ಕಾಲನಿಯಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ನಿವಾಸಿಗಳ ಬದುಕು ಚಿಂತಾಜನಕವಾಗಿದೆಯಲ್ಲದೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ರಜೆ ನೀಡಲಾಗಿತ್ತು.

ಕೆಲ ಮನೆಗಳು ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೇಕಾರ ಓಣಿ, ಕಳ್ಳಿ ಪೇಟೆ ಓಣಿ, ಉಳ್ಳಾಗಡ್ಡಿ ಹಾಗೂ ಆಶ್ರಯ ಕಾಲನಿ ಸೇರಿ 200ಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿದ್ದರಿಂದಾಗಿ ರಾತ್ರಿಯಿಡಿ ನಿವಾಸಿಗಳು ನಿದ್ದೆಗೆಟ್ಟು ನೀರನ್ನು ಹೊರ ಚೆಲ್ಲುವಲ್ಲಿ ಹರಸಾಹಸ ಪಟ್ಟರು.

ಹಲವಾರು ವರ್ಷಗಳಿಂದ ನಾವು ಈ ಬಡಾವಣೆಯಲ್ಲಿ ವಾಸವಿದ್ದು, ಇಲ್ಲಿಯವರೆಗೂ ಮಳೆ ನೀರು ಮನೆಗೆ ನುಗ್ಗಿರಲಿಲ್ಲ. ಆದರೆ, ಇತ್ತೀಚೆಗೆ ನಗರದ ಕೆಸಿಫ್ ರಸ್ತೆ ಕಾಮಗಾರಿ ಮುಗಿದಿದ್ದು, ರಸ್ತೆ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಚರಂಡಿ ನಿರ್ಮಿಸಿದ್ದರಿಂದ ನೀರಿನ ಒತ್ತಡ ಹೆಚ್ಚಾಗಿ ನೀರು ನುಗ್ಗಿದೆ ಎನ್ನುತ್ತಾರೆ ನಿವಾಸಿಗಳಾದ ಶಂಕ್ರಪ್ಪ ಪೂಜಾರ, ಸಲೀಮ ಗಡಾದ.

ಸ್ಥಳಕ್ಕೆ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುದ್ದೇಬಿಹಾಳ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಬೇಲೂರ ಬಳಿಯ ಸಾಸ್ವಿ ಹಳ್ಳಕ್ಕೆ ಅಪಾರ ನೀರು ಹರಿದು ಬಂದು ಕಬ್ಬು, ಗೋವಿನಜೋಳ, ಚೆಂಡು ಹೂ ಬೆಳೆ ನಾಶವಾಗಿದೆ. ಜಾಲಿಹಾಳ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿತ್ತು.

ಮುಂಜಾಗ್ರತೆ ವಹಿಸಿ: ಸೋಮವಾರ ಸುರಿದ ಭಾರಿ ಮಳೆಯಿಂದ ಹಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಾದಾಮಿ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗುಳೇದಗುಡ್ಡ ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರ, ತಾಪಂನ ಮಲ್ಲಿಕಾರ್ಜುನ ಕಲಾದಗಿ ಅವರಿಗೆ ದೂರವಾಣಿಯಲ್ಲಿ ಸೂಚನೆ ನೀಡಿದ್ದಾರೆ. ಆಸ್ತಿ, ಪಾಸ್ತಿ ಹಾನಿಯಾದ ಕುರಿತು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದೂ ತಿಳಿಸಿದ್ದಾರೆ.

ಬಾದಾಮಿ ತಾಲೂಕಿನಲ್ಲಿ ಇಲ್ಲಿಯವರೆಗೆ 80 ಮನೆಗಳಿಗೆ ಹಾನಿಯಾಗಿದೆ. ಒಂದು ಆಕಳು ಕರು ಸತ್ತಿದೆ. ಯಾವುದೇ ಜೀವ ಹಾನಿಯಾಗಿಲ್ಲ. ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಜೆ.ಬಿ. ಮಜ್ಜಗಿ, ತಹಸೀಲ್ದಾರ್ ಬಾದಾಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net