ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ

BDM NEWS 29-1
Published on

ಬಾದಾಮಿ: ಐತಿಹಾಸಿಕ ಬಾದಾಮಿ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸುವುದು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾದಾಮಿ ನಗರ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಮದುರ್ಗ ಕ್ರಾಸ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಹಸೀಲ್ದಾರ್ ಸುಹಾಸ ಇಂಹಳೆ ಅವರಿಗೆ ಮನವಿ ಸಲ್ಲಿಸಿದರು.

ಐತಿಹಾಸಿಕ ಬಾದಾಮಿ ನಗರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೋಟ್ಯಂತರ ಅನುದಾನ ಬಿಡುಗಡೆಯಾಗಿದ್ದು, ಅನುದಾನ ಸಮರ್ಪಕ ಅನುಷ್ಠಾನ, ಬನಶಂಕರಿಯಿಂದ ಬಾದಾಮಿವರೆಗೆ 5 ಕೋಟಿ ರೂ. ವೆಚ್ಚದ ಕಾಮಗಾರಿ ಡಿಪಿಆರ್ ಪ್ರಕಾರ ಕೈಗೊಳ್ಳಬೇಕು. ಮ್ಯೂಜಿಯಂ ರಸ್ತೆ ನಿರ್ಮಾಣ, ಸಿಡಿಲು ಪಡಿಗೆ ರಸ್ತೆ ನಿರ್ಮಿಸಬೇಕು. ಪಟ್ಟಣದಲ್ಲಿ ಪ್ರತಿ 200 ಮೀಟರಿಗೊಂದು ಶೌಚಗೃಹ ಮತ್ತು ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ಹಿಂದು ರುದ್ರಭೂಮಿಗೆ ಜಾಗ ಮಂಜೂರು ಮಾಡಬೇಕು. ಲೋಕೋಪಯೋಗಿ, ಕುಡಿಯುವ ನೀರು, ನಗರೋತ್ಥಾನ, ಅಮೃತ, ಹೃದಯ ಯೋಜನೆಗಳನ್ನು ಡಿಪಿಆರ್ ಪ್ರಕಾರ ಮಾಡಬೇಕು. ಬಾದಾಮಿ ರೈಲ್ವೆ ನಿಲ್ದಾಣದ ಹತ್ತಿರ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಬಾದಾಮಿ ರೈಲು ನಿಲ್ದಾಣ ಆದರ್ಶ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘ, ರಾಜ್ಯ ಟ್ಯಾಕ್ಸಿ ವಾಹನ ಚಾಲಕರ ಸಂಘ, ಮುಸ್ಲಿಂ ಸೋಸಿಯತ್ ಸಂಘ, ದಲಿತ ಸಂಘಟನೆ(ಅಂಬೇಡ್ಕರ್ ವಾದ), ಯುವಕರ ಸೇನೆ, ಉಜ್ವಲ ಶಿಕ್ಷಣ ಸಂಸ್ಥೆ, ವೀರ ಸಿಂಧೂರ ಲಕ್ಷ್ಮ್ಮಣ ಸಂಘ, ನಿಸರ್ಗ ಬಳಗ, ಸಿದ್ದರಾಮೇಶ್ವರ ಸೇವಾ ಸಮಿತಿ, ಚಾಲುಕ್ಯ ರಾಕ್ ಕ್ಲೈಂಬಿಂಗ್ ತರಬೇತಿ ಸಂಸ್ಥೆ, ಜೈಹನುಮಾನ ಸಂಘ, ಕೆಂಚಮ್ಮ ದೇವಿ ಸಂಘದ ಸಂಘಟನೆಗಳು ಸದಸ್ಯರು ಭಾಗವಹಿಸಿದ್ದರು.

ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಹಿರೇಹಾಳ, ಕಾರ್ಯದರ್ಶಿ ಇಷ್ಟಲಿಂಗ ನರೇಗಲ್, ಚಂದ್ರು ಸುಡಿ, ಸೋಮಣ್ಣ ಬೆಂಗೇರಿ, ಇಮ್ರಾನ್ ಕಲಬುರ್ಗಿ, ರವಿ ಅಬ್ಬಿಗೇರಿ, ಇಮ್ರಾನ್ ಪಿರ್ಜಾದೆ, ಸೊಹೇಲ್ ದೊಡವಾಡ ಇತರರು ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net