

ಬಾದಾಮಿ: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಮೂರು ದಿನಗಳಿಂದ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಉತ್ತರಾರಾಧನೆ ನಿಮಿತ್ತ ಶನಿವಾರ ರಥೋತ್ಸವ ಜರುಗಿತು. ಬೆಳಗ್ಗೆ ರಾಯರ ವೃಂದಾವನಕ್ಕೆ ತರಹೇವಾರಿ ಪುಷ್ಪಗಳಿಂದ ಅಲಂಕಾರ ಪೂಜೆ, ಪಂಚಾಮೃತ, ಅಭಿಷೇಕ, ನಂತರ ವಿಪ್ರ ಸಮಾಜದವರಿಂದ ಸ್ವಸ್ಥಿವಾಚನಾದಿಗಳ ಮೂಲಕ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಪುಷ್ಪ, ಬಾಳೆ, ಮಾವಿನ ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಪ್ರಲ್ಹಾದರಾಯರು ವಿರಾಜಮಾನರಾಗಿ ವಿವಿಧ ಸಂಗೀತ, ದಾಸ ಪದಗಳ ಮೂಲಕ ಹಾಡುತ್ತ ಕುಣಿಯುತ್ತ ವೃಂದಾವನ ಸುತ್ತು ಹಾಕಿ ಮಂಗಳರಾತಿ, ಪುಷ್ಪಾರ್ಪಣೆ ಮಾಡುವ ಮೂಲಕ ಸಂಪನ್ನಗೊಂಡಿತು.
ನಂತರ ಮಧ್ಯಾಹ್ನ ಅಲಂಕಾರ ಸೇವೆ, ಮಹಾ ಪ್ರಸಾದ ನಡೆಯಿತು. ವಿವಿಧ ರೀತಿಯ ಸೇವಾಕರ್ತರಿಗೆ ಶೇಷ ವಸ, ಪರಿಮಳ ಪ್ರಸಾದ ವಿತರಣೆ ಮಾಡಲಾಯಿತು. ಅರ್ಚಕರಾದ ಪ್ರಸನ್ನ ಪುರೋಹಿತ, ಶ್ರೀನಿಧಿ ಹಾಗೂ ಶ್ರೀಹರಿ ಇನಾಮದಾರ ಅವರಿಂದ ವೃಂದಾವನ ಅಲಂಕಾರ ಸೇವೆ ನಡೆಯಿತು.
ಕಳೆದ ಮೂರು ದಿನಗಳಿಂದ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆಯಂದು ಭಕ್ತರು ಸೇವಾ ಕಾರ್ಯಗಳನ್ನು ಕೈಗೊಂಡರು. ನಿತ್ಯ ಅನ್ನ ಸಂತರ್ಪಣೆ ಜರುಗಿತು.
ಅಧ್ಯಕ್ಷ ಕೃಷ್ಣ ಕೆರೂರ, ಕಾರ್ಯದರ್ಶಿ ಅಡಿವೇಂದ್ರ ಇನಾಮದಾರ, ಖಜಾಂಚಿ ಪ್ರಕಾಶ ಕುಲಕರ್ಣಿ, ಡಾ.ವಿ.ವೈ.ಭಾಗವತ, ವಿಜಯೀಂದ್ರ ಇನಾಮದಾರ, ಎಸ್.ಜಿ.ಕುಲಕರ್ಣಿ, ಪಿ.ಪಿ.ಕಾರಕೂನ, ಪ್ರಲ್ಹಾದ ಇನಾಮದಾರ, ಆರ್.ಕೆ.ದೇಶಪಾಂಡೆ, ಪ್ರಸನ್ನ ಮುಗಳಿ, ಜಯತೀರ್ಥ ಇನಾಮದಾರ, ಅನಂತ ಗುಡಿ, ಹನುಮಂತ ಕೆರೂರ, ವಿಷ್ಣು ಗುಡಿ, ಎಸ್.ಟಿ.ಅಂಬೇಕರ ಹಾಗೂ ವಾಣಿ ಭಜನಾ ಮಂಡಳಿ ಭಗೀನಿಯರು ಪಾಲ್ಗೊಂಡಿದ್ದರು.