ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಖಚಿತ

BDM-2-2
Published on

ಬಾದಾಮಿ: ಪಿಕೆಪಿಎಸ್ ಕ್ಷೇತ್ರದ ವತಿಯಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಹಣಮಂತಗೌಡ ಗೌಡರ ಅವರಿಗೆ ಪಿಕೆಪಿಎಸ್ ಮತದಾರರು ಸಂಪೂರ್ಣ ಬೆಂಬಲ ನೀಡಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಣಮಂತಗೌಡ ಗೌಡರ ಅವರ ಗೆಲುವು ಖಚಿತವಾಗಿದೆ. ತಾಲೂಕಿನಲ್ಲಿ ನಮ್ಮ ಪಕ್ಷದ ಬೆಂಬಲಿತ ಸದಸ್ಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ಪಕ್ಷ ಘೋಷಿಸಿರುವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ. ನಾವು ಪಕ್ಷದ ಮುಖಂಡರು ಕೂಡ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಹಣಮಂತಗೌಡ ಗೌಡ್ರ ಗೆಲುವು ಖಚಿತವಾಗಿದೆ. ನಮ್ಮ ತಾಲೂಕಿನಲ್ಲಿ ಬರುವ 51 ಪಿಕೆಪಿಎಸ್‌ಗಳಲ್ಲಿ 35 ಕ್ಕೂ ಅಧಿಕ ಪಿಕೆಪಿಎಸ್ ಮತದಾರರು ನಮ್ಮ ಪಕ್ಷದವರಾಗಿದ್ದು, ಹೀಗಾಗಿ ಅಭ್ಯರ್ಥಿ ಗೆಲುವು ಸುಲಭವಾಗಿದೆ ಎಂದರು.

ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ಧಾಂತವಿದೆ. ಹೀಗಾಗಿ ಪಕ್ಷ ಘೋಷಿಸಿರುವ ಅಭ್ಯರ್ಥಿಗೆ ಎಲ್ಲ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬಿಜೆಪಿ ತಾಲೂಕಾಧ್ಯಕ್ಷ ಶಿವನಗೌಡ ಸುಂಕದ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಗೆ ಬಂಡಾಯದ ಬಿಸಿ ತಟ್ಟಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಅಭ್ಯರ್ಥಿ ಹಣಮಂತಗೌಡ ಗೌಡ್ರ ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net