

ಬಾದಾಮಿ: ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು 109 ವರ್ಷಗಳ ಹಿಂದೆ ಮಲಪ್ರಭಾ ನದಿ ತಟದಲ್ಲಿ ಶಿವಯೋಗಮಂದಿರ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ದಾರಿ ತೋರಿದ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೊಳ ಹೇಳಿದರು.
ತಾಲೂಕಿನ ಶಿವಯೋಗಮಂದಿರದಲ್ಲಿ ಹಾನಗಲ್ಲ ಕುಮಾರ ಶ್ರೀಗಳ 90ನೇ ಪುಣ್ಯ ಸ್ಮರಣೋತ್ಸವ ಹಾಗೂ 110ನೇ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ವಿಚಾರ ಸಂಕಿರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಯೋಗ ಮಂದಿರ ಶಿವನ ನಿಜ ಸ್ಥಾನದಂತಿದೆ. ಶತಮಾನದ ಹಿಂದೆ ಕುಮಾರ ಶ್ರೀಗಳ ದೂರದೃಷ್ಟಿಯಿಂದ ಲೋಕ ಕಲ್ಯಾಣಾರ್ಥ ಕೈಗೊಂಡ ಕಾರಣ ಇಂದು ನಾವುಗಳೆಲ್ಲ ಸುಸಂಸ್ಕೃತರಾಗಿರಲು ಸಾಧ್ಯವಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ನೆರೆ ಹಾವಳಿಯಿಂದ ಶಿವಯೋಗ ಮಂದಿರದಿಂದ ಮಂಗಳೂರುವರೆಗೆ ಹಾನಿಯಾದ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಧಾರ್ಮಿಕವಾಗಿ ನಮ್ಮನ್ನೆಲ್ಲ ಸನ್ಮಾರ್ಗದತ್ತ ಕೊಂಡೊಯ್ಯುವ ಇಂತಹ ಮಠ ಮಾನ್ಯಗಳು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿಗೆ ನಾವುಗಳು ಬದ್ಧರಾಗಿದ್ದೇವೆ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಡಾ.ಸಂಗನಬಸವ ಶ್ರೀಗಳು ಮಾತನಾಡಿ, ಕುಮಾರೇಶನ ಅನುಗ್ರಹದಿಂದ ಸಮಾಜದ ಎಲ್ಲರೂ ಸಂತೃಪ್ತರಾಗಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ಅವರ ದೂರದೃಷ್ಟಿಯ ಆಶೀರ್ವಾದ ನಮಗೆಲ್ಲ ಶ್ರೀರಕ್ಷೆ. ಜತೆಗೆ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹಾಗೂ ಶೈಕ್ಷಣಿಕವಾಗಿ ಬೃಹತ್ ಹೆಜ್ಜೆ ಇಡಲು ಸನ್ನದ್ಧವಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಗುರು ಸದಾಶಿವ ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ ಒಂದು ಲಕ್ಷ ರೂ. ಶಿವಯೋಗಮಂದಿರ ಸಂಸ್ಥೆ ಹೆಸರಿನಲ್ಲಿ ಠೇವಣಿ ಮಾಡಲಾಗಿದ್ದು, ಪ್ರತಿ ವರ್ಷ ಬಡ್ಡಿಯಲ್ಲಿ ಬ್ಯಾಂಕ್‌ನ ಹೆಸರಿನಡಿ ಒಂದು ದಿನದ ದಾಸೋಹಕ್ಕೆ ಬಳಕೆ ಮಾಡಬೇಕು ಎಂದರು.
ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ, ಜಮಖಂಡಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಮಾಜಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಶಿವಾನಂದ ಕೌಜಲಗಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ, ಶರಣಪ್ಪಗೌಡ ಪಾಟೀಲ, ರಾಜಶೇಖರ ಶೀಲವಂತ, ಆಪ್ತ ಕಾರ್ಯದರ್ಶಿ ಆರ್.ಬಿ. ಪಾಟೀಲ, ಸಿದ್ದು ಟೆಂಗಿನಕಾಯಿ, ಉಮೇಶ ಹಕ್ಕಿ, ಬಿ.ಆರ್. ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.
ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶಗಳಿವೆ. ತೋಟಗಾರಿಕೆ ವಿಶ್ವವಿದ್ಯಾಲಯ ತೋಟಗಾರಿಕೆ ಬೆಳೆಗಳ ಕುರಿತು ಸಂಶೋಧನೆ ನಡೆಸುತ್ತಿದೆ. ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರು ಆಧುನಿಕ ತಂತ್ರಜ್ಞಾನದೊಂದಿಗೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಾದರಿ ಬೆಳೆಗಳನ್ನು ಬೆಳೆದು ರಫ್ತ್ತು ಮಾಡುವಂತಾಗಬೇಕು. ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.
- ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ
EndFragment