

ಬಾದಾಮಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗಿದ್ದು, ಇದು ಮುಂಬರುವ ಎಲ್ಲ ಚುನಾವಣೆಗೆ ತಳಹದಿಯಾಗಿದೆ. ಮುಂದಿನ ಎರಡು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಗ್ರಾಪಂ ಚುನಾವಣೆ ಪಕ್ಷರಹಿತವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರದ ಎಲ್ಲ ಜನಪ್ರಿಯ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಬಂದ್ ಮಾಡುತ್ತಿದ್ದಾರೆ. ಅನ್ನಭಾಗ್ಯ, ಶೂಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಎಲ್ಲ ಯೋಜನೆ ಮುಂದುವರಿಸುತ್ತಿಲ್ಲ. ಖಜಾನೆ ಖಾಲಿಯಾಗಿದೆ. ವಸತಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಎಲ್ಲ ಸಮಾಜದವರೂ ಅಧಿಕಾರ ಅನುಭವಿಸಲು ಕಾಂಗ್ರೆಸ್ ಮೀಸಲಾತಿ ಜಾರಿ ಮಾಡಿದೆ. ಇಂದು ಎಸ್‌ಸಿ, ಎಸ್‌ಟಿ, ಹಿಂದುಳಿದವರು ಗ್ರಾಪಂ ಸದಸ್ಯರಾಗಲು ಮೀಸಲಾತಿ ಕಾರಣ. ಬಿಜೆಪಿಯವರ ಕೊಡುಗೆ ಏನು ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದೊಡ್ಡ ಜವಾಬ್ದಾರಿ ಇದೆ
ನೀವೆಲ್ಲರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಗ್ರಾಮಸಭೆಗೆ ಅಧಿಕಾರ ಇದೆ. ಪಿಡಿಒ ನಿಮ್ಮ ಹಿಂದೆ ಬರಬೇಕು. ನೀವು ಪಿಡಿಒ ಹಿಂದೆ ಹೋಗಬೇಡಿರಿ. ನಿಮ್ಮ ಮಾತು ಕೇಳದಿದ್ದರೆ ಅಂತಹ ಪಿಡಿಒ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರಿ ಎಂದು ಹೇಳಿದರು.
ಎಲ್ಲರೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಎಲ್ಲ ರಂಗಗಳಲ್ಲಿ ಅಧಿಕಾರ ಅನುಭವಿಸಬೇಕು. ಮಹಿಳೆಯರ ಅಧಿಕಾರವನ್ನು ಅವರ ಪತಿಯಂದಿರು ಅನುಭವಿಸುವುದು ಬೇಡ ಎಂದ ಅವರು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಕರ್ತವ್ಯಗಳು, ಜವಾಬ್ದಾರಿಗಳು, ಸೌಲಭ್ಯಗಳ ಬಗ್ಗೆ ನ್ಯಾಯವಾದಿಗಳಿಂದ ತರಬೇತಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಭ್ರಷ್ಟಾಚಾರದಿಂದ ಬಿಜೆಪಿ ಅಧಿಕಾರಕ್ಕೆ
ಇಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಣದಿಂದ ಅಧಿಕಾರಕ್ಕೆ ಬಂದಿದೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಗ್ರಾಪಂ ಚುನಾವಣೆ ಪಕ್ಷರಹಿತವಾದರೂ ಅಧಿಕಾರ ಹಿಡಿಯಲು ಆಮಿಷ ತೋರಿಸುತ್ತಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿರಿ ಎಂದು ಸಲಹೆ ನೀಡಿದರು.
ಬಾದಾಮಿ ಹಾಗೂ ಗುಳೆದಗುಡ್ಡ ತಾಲೂಕಿನ 42 ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು. ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಿಪ ಸದಸ್ಯ ಆರ್.ಬಿ.ತಿಮ್ಮಪುರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಎಂ.ಬಿ.ಹಂಗರಗಿ, ಹೊಳಬಸು ಶೆಟ್ಟರ, ಪಿ.ಆರ್.ಗೌಡರ, ರಾಜಮಹ್ಮದ ಬಾಗವಾನ, ಮಹೇಶ ಹೊಸಗೌಡರ, ಮಧು ಯಡ್ರಾಮಿ, ಭೀಮಸೇನ ಚಿಮ್ಮನಕಟ್ಟಿ, ಮುತ್ತಣ್ಣ ಯರಗೂಪ್ಪ, ಅಶೋಕ ಕೋಟನಕರ, ಮಂಜು ಹೊಸಮನಿ, ಶಂಕರ ಕನಕಗಿರಿ, ಇಲಿಯಾಸ ಜಮಾದಾರ, ರಾಜು ಜವಳಿ, ಶೈಲಾ ಪಾಟೀಲ, ಸುದೀಂದ್ರ ಹುನಗುಂಡಿ, ಮಹಾಂತೇಶ ಹಟ್ಟಿ, ಶಿವು ಮಣ್ಣೂರ, ಕಾಮಣ್ಣ ಪೂಜಾರ, ಕಾರ್ಯಕರ್ತರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಯಲಿಗಾರ ಸ್ವಾಗತಿಸಿ, ನಿರೂಪಿಸಿದರು.
ಪಕ್ಷದ ವಿರುದ್ಧವೇ ಅಸಮಾಧಾನ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಯಕರು ಯಾರು ಪ್ರಚಾರಕ್ಕೆ ಬಂದಿಲ್ಲ. ನಮಗೆ ಬಹಳಷ್ಟು ತೊಂದರೆಯಾಯಿತು ಎಂದು ಕಿತ್ತಲಿ ಗ್ರಾಪಂ ನೂತನ ಸದಸ್ಯ ಸಂಗಣ್ಣ ಜಾಬನ್ನವರ ನಾಯಕರ ವಿರುದ್ಧ ಕಿಡಿಕಾರಿದರು. ಇದರಿಂದ ವೇದಿಕೆಯಲ್ಲಿ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಯಿತು. ಉಳಿದ ನಾಯಕರು ನಾವೆಲ್ಲ ಪ್ರಚಾರಕ್ಕೆ ಹೋಗಿದ್ದೇವೆ ಏನು ಮಾತಾಡುತ್ತಾರೆ ಎಂದು ವೇದಿಕೆ ಮೇಲೆ ಮಾತಿನ ಚಕಮಕಿ ನಡೆಯಿತು. ನಂತರ ಸಿದ್ದರಾಮಯ್ಯ, ಎಸ್.ಜಿ.ನಂಜಯ್ಯನಮಠ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಗ್ರಾಪಂ ಚುನಾವಣೆ ಗೆಲ್ಲುವುದು ಕಷ್ಟ
ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಬಹುದು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದು ಬಹಳ ಕಷ್ಟ ಇದೆ ಎಂದು ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅಭಿಪ್ರಾಯಪಟ್ಟರು. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ವಿಧಾನಸಭೆಯಲ್ಲಿ ಶಾಸಕರನ್ನು ಖರೀದಿ ಮಾಡುವ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಹಾಗೆ ಗ್ರಾಪಂ ಸದಸ್ಯರನ್ನು ಖರೀದಿ ಮಾಡುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತದೆ ಎಂದು ಎಸ್.ಆರ್.ಪಾಟೀಲ ಆರೋಪಿಸಿದರು.
EndFragment