

ಬಾದಾಮಿ: ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ತರಲು ಗ್ರಾಪಂ ಕಾರ್ಯಪಡೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಸುಹಾಸ ಇಂಗಳೆ ಸಲಹೆ ನೀಡಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋವಿಡ್ ನಿಯಂತ್ರಣ ಕಾರ್ಯಪಡೆಗಳ (ಟಾಸ್ಕ್ ಫೋರ್ಸ್) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಸರ್ವೇ ಕಾರ್ಯ ಹೆಚ್ಚಿಸಬೇಕು. ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಿಗೆ ಕೋವಿಡ್ ಔಷಧ ಕಿಟ್ ವಿತರಿಸಬೇಕು. ಅಗತ್ಯವಿರುವ ಔಷಧ ಕಿಟ್‌ಗಳನ್ನು ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ನೀಡಲಾಗುವುದು. ಕರೊನಾ ಸೋಂಕು ಕಂಡುಬಂದವರನ್ನು ಸರ್ಕಾರಿ ಆಸ್ಪತ್ರೆ ಇಲ್ಲವೆ ಕೋವಿಡ್ ಕೇರ್ ಸೆಂಟರ್‌ಗೆ ಮನವೊಲಿಸಿ ಕಳುಹಿಸಿಕೊಡಬೇಕು ಎಂದು ಹೇಳಿದರು.
ಸಿಪಿಐ ರಮೇಶ ಹಾನಾಪುರ ಮಾತನಾಡಿ, ಗ್ರಾಮಸ್ಥರು ಕಡ್ಡಾಯವಾಗಿ ಕರೊನಾ ನಿಯಮ ಪಾಲಿಸುವ ಜತೆಗೆ ಗ್ರಾಮೀಣ ಕಾರ್ಯಪಡೆಗೆ ಸಹಕಾರ ನೀಡಬೇಕು. ಅನಗತ್ಯವಾಗಿ ಹೊರಗಡೆ ಓಡಾಡಬಾರದು. ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
ತಾಪಂ ಇಒ ಅರ್ಜುನ ಒಡೆಯರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಈರಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಕಿತ್ತಲಿ, ಸದಸ್ಯರಾದ ನಿಂಗನಗೌಡ ಹಿರೇನಿಂಗನಗೌಡರ, ಸಂಗಪ್ಪ ಬಾರಕೇರ, ರಾಜು ಕೋಟಿ, ಶಿವಾನಂದ ಚಳ್ಳಪ್ಪನವರ, ಪಿಡಿಒ ಜಿ.ಬಿ.ನಾಯಿಕ, ಕಾರ್ಯದರ್ಶಿ ಎಂ.ವಿ.ಮೇಟಿ, ಮುಖಂಡರಾದ ವಕೀಲ ರಮೇಶ ಕಿತ್ತಲಿ, ಕವಿ ಶೇಖರ ಕುಂಬಾರ, ಹನುಮಂತ ತಳವಾರ, ಗ್ರಾಪಂ ಸಿಬ್ಬಂದಿ ಇದ್ದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣಾ ಪರಿಕರಗಳಾದ ಮಾಸ್ಕ್, ಸ್ಯಾನಿಟೈಸರ್, ಫೇಸ್‌ಶೀಲ್ಡ್, ಕೈಗವಸು ಗ್ರಾಪಂ ಸದಸ್ಯರು ವಿತರಿಸಿದರು.
ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಗ್ರಾಮಸ್ಥರಲ್ಲೂ ಕರೊನಾ ಬಗ್ಗೆ ತಿಳಿವಳಿಕೆ ಮೂಡಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
- ಜಿ.ಬಿ.ನಾಯಿಕ ಪಿಡಿಒ ಹೆಬ್ಬಳ್ಳಿ ಗ್ರಾಪಂ